ಸಾರಾಂಶ
ಸಿಡ್ನಿ: ಹೊಸ ವರ್ಷ, ಹಳೆ ಕತೆ ಎಂಬಂತೆ ಭಾರತ ಕ್ರಿಕೆಟ್ ತಂಡ ಸಿಡ್ನಿ ಟೆಸ್ಟ್‌ನಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಸರಣಿಯ ಅತಿ ಮಹತ್ವದ 5ನೇ ಟೆಸ್ಟ್‌ನಲ್ಲೂ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ್ದು, ಕೇವಲ 185 ರನ್‌ಗೆ ಆಲೌಟಾಗಿದ್ದಾರೆ. ಆದರೆ ಸಿಡ್ನಿ ಪಿಚ್‌ನಲ್ಲಿ ಬ್ಯಾಟಿಂಗ್ ಕಷ್ಟವಾಗುವಂತೆ ತೋರುತ್ತಿದ್ದು, ಆಸ್ಟ್ರೇಲಿಯಾವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಭಾರತ ಕಾಯುತ್ತಿದೆ.
ಹೀಗಾಗಿ 2ನೇ ದಿನದಾಟ ಕುತೂಹಲ ಮೂಡಿಸಿದೆ. ಮೊದಲ ದಿನದಂತ್ಯಕ್ಕೆ ಆಸೀಸ್ 1 ವಿಕೆಟ್‌ಗೆ 9 ರನ್ ಗಳಿಸಿದ್ದು, ಇನ್ನು 176 ರನ್ ಹಿನ್ನಡೆಯಲ್ಲಿದೆ.ಸತತ ವೈಫಲ್ಯ ಅನುಭವಿಸುತ್ತಿರುವ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ‘ವಿಶ್ರಾಂತಿ’ ಪಡೆದುಕೊಂಡರು. ಹೀಗಾಗಿ ತಂಡ ಜಸ್‌ಪ್ರೀತ್ ಬೂಮ್ರಾ ನಾಯಕತ್ವದಲ್ಲಿ ಕಣಕ್ಕಿಳಿಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೂಮ್ರಾ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ರೀತಿಯ ಪ್ರದರ್ಶನ ಭಾರತದ ಬ್ಯಾಟರ್‌ಗಳಿಂದ ಕಂಡು ಬರಲಿಲ್ಲ.
ಆರಂಭಿಕ ಆಘಾತ: ಮತ್ತೆ ಕೆ.ಎಲ್.ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರೂ, ತಂಡಕ್ಕೆ ಉತ್ತಮ ಆರಂಭವೇನೂ ಸಿಗಲಿಲ್ಲ. ರಾಹುಲ್ 4 ರನ್‌ಗೆ ನಿರ್ಗಮಿಸಿದರೆ, ಜೈಸ್ವಾಲ್ 11 ರನ್‌ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಬದಲು ತಂಡಕ್ಕೆ ಮರಳಿದ ಶುಭ್‌ಮನ್ ಗಿಲ್ ಗಿಲ್ ಕೂಡಾ ಆಸೀಸ್ ದಾಳಿಯನ್ನು ಎದುರಿಸಿ ನಿಲ್ಲಲಿಲ್ಲ. ಆದರೆ 3ನೇ ವಿಕೆಟ್‌ಗೆ ಅವರು ವಿರಾಟ್ ಕೊಹ್ಲಿ ಜೊತೆ 40 ರನ್ ಜೊತೆಯಾವಾಡಿದರು. 20 ರನ್ ಗಳಿಸಿದ್ದ ಗಿಲ್ ಊಟದ ವಿರಾಮಕ್ಕೂ ಮುನ್ನ ಕೊನೆ ಎಸೆತದಲ್ಲಿ ಲಯನ್‌ಗೆ ವಿಕೆಟ್ ಒಪ್ಪಿಸಿದರು.
ಕೊಹ್ಲಿ ಹಳೇ ಚಾಳಿ: ಊಟದ ವಿರಾಮಕ್ಕೆ 3 ವಿಕೆಟ್ 57 ರನ್ ಗಳಿಸಿದ್ದ ತಂಡಕ್ಕೆ ದೊಡ್ಡ ಜೊತೆಯಾಟ ಅಗತ್ಯವಿತ್ತು. ವಿರಾಟ್ ಕೊಹ್ಲಿ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟುಕೊಂಡಿತ್ತು. ಆರಂಭದಲ್ಲೇ ಔಟಾಗುವುದರಿಂದ ಪಾರಾದರೂ, ಕೊಹ್ಲಿ ದೊಡ್ಡ ಸ್ಕೋರ್ ಏನೂ ಗಳಿಸಲಿಲ್ಲ. ಬೋಲಂಡ್ ಓವರ್‌ನಲ್ಲಿ ಆಫ್ ಸ್ಟಂಪ್‌ನಿಂದಾಚೆ ಬರುತ್ತಿದ್ದ ಚೆಂಡನ್ನು ಹೊಡೆಯಲು ಮುಂದಾದ ಕೊಹ್ಲಿ, ಸ್ಲಿಪ್‌ನಲ್ಲಿ ವೆಬ್‌ಸ್ಟೆರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ರಿಷಭ್ ಆಸರೆ: ಪಂದ್ಯಕ್ಕೆ ಈ ಪಂದ್ಯದಲ್ಲಿ ಅಲ್ಪ ಆಸರೆಯಾಗಿದ್ದು ರಿಷಭ್ ಪಂತ್ ಮಾತ್ರ. ಆಸೀಸ್ ಬೌಲರ್‌ಗಳ ಉರಿ ದಾಳಿ ತಮ್ಮ ದೇಹಕ್ಕೆ ಅಪ್ಪಳಿಸುತ್ತಿದ್ದರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ರಿಷಭ್ 98 ಎಸೆತಗಳಲ್ಲಿ 40 ರನ್ ಸಿಡಿಸಿದರು. ಆದರೆ ರಿಷಭ್ ನಿರ್ಗಮನದೊಂದಿಗೆ ಭಾರತ ಮತ್ತೆ ಕುಸಿತಕ್ಕೊಳಗಾಯಿತು. ಪಂತ್ ಔಟಾದ ಮುಂದಿನ ಎಸೆತದಲ್ಲೇ ಯುವ ಸೂಪರ್‌ಸ್ಟಾರ್ ನಿತೀಶ್ ರೆಡ್ಡಿ ಕೂಡಾ ಗೋಲ್ಡನ್ ಡಕ್‌ಗೆ ಬಲಿಯಾದರು. ಒಂದು ಹಂತದಲ್ಲಿ 120ಕ್ಕೆ 4 ವಿಕೆಟ್ ನಷ್ಟಕ್ಕೊಳಗಾಗಿದ್ದ ತಂಡ ಬಳಿಕ 65 ರನ್ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ನಾಯಕ ಬೂಮ್ರಾ(17 ಎಸೆತಕ್ಕೆ 22) ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು. ಸ್ಕಾಟ್ ಬೋಲಂಡ್ 4, ಮಿಚೆಲ್ ಸ್ಟಾರ್ಕ್ 3, ನಾಯಕ ಕಮಿನ್ಸ್ 2 ವಿಕೆಟ್ ಕಿತ್ತರು.
ಖವಾಜ ನಿರ್ಗಮನ: ಬಳಿಕ ಇನ್ನಿಂಗ್ಸ್ ಆರಂಭಿಸಿದ ಆಸೀಸ್ 3 ಓವರ್ ಬ್ಯಾಟ್ ಮಾಡಿತು. ಆದರೆ ದಿನದಾಟದ ಕೊನೆ ಎಸೆತದಲ್ಲಿ ಖವಾಜ ಔಟಾದರು.ಸ್ಕೋರ್: ಭಾರತ ಮೊದಲ ಇನ್ನಿಂಗ್ಸ್ 185/10 (ರಿಷಭ್ 40, ಜಡೇಜಾ 26, ಬೂಮ್ರಾ 22, ಬೋಲಂಡ್ 4-31, ಸ್ಟಾರ್ಕ್ 3-49, ಕಮಿನ್ಸ್ 2-37), ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 9/1(ಮೊದಲ ದಿನದಂತ್ಯಕ್ಕೆ) (ಕಾನ್‌ಸ್ಟಾಸ್ ಔಟಾಗದೆ 7, ಬೂಮ್ರಾ 1-7)
11 ಬಾರಿ: ಬೂಮ್ರಾ ಈ ಸರಣಿಯಲ್ಲಿ 11 ಬಾರಿ ಆರಂಭಿಕ ಆಟಗಾರರನ್ನು ಔಟ್ ಮಾಡಿದ್ದಾರೆ. ಇದು 2022ರ ಬಳಿಕ ಟೆಸ್ಟ್ ಸರಣಿಯೊಂದರಲ್ಲಿ ಯಾವುದೇ ಬೌಲರ್‌ನ ಜಂಟಿ ಗರಿಷ್ಠ.
22 ರನ್: ಬೂಮ್ರಾ 22 ರನ್ ಗಳಿಸಿದರು. ಇದು ಈ ಸರಣಿಯ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ನಾಯಕನಿಂದ ದಾಖಲಾದ ಗರಿಷ್ಠ ಸ್ಕೋರ್.06 ಸಲ: ಸರಣಿಯಲ್ಲಿ ಖವಾಜರನ್ನು ಬೂಮ್ರಾ 6 ಬಾರಿ ಔಟ್ ಮಾಡಿದ್ದಾರೆ. ಸರಣಿಯೊಂದರಲ್ಲಿ ಬ್ಯಾಟರ್‌ನ ಗರಿಷ್ಠ ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ. 2016ರಲ್ಲಿ ಜಡೇಜಾ 6 ಬಾರಿ ಇಂಗ್ಲೆಂಡ್‌ನ ಕುಕ್ ವಿಕೆಟ್ ಕಿತ್ತಿದ್ದರು.07 ಬಾರಿ: ಭಾರತ ಕಳೆದ 8 ಟೆಸ್ಟ್‌ಗಳ ಮೊದಲ ಇನ್ನಿಂಗ್ಸ್‌ಗಳಲ್ಲಿ 7ನೇ ಬಾರಿ 80ಕ್ಕಿಂತ ಕಡಿಮೆ ಓವರ್‌ಗಳಲ್ಲಿ ಆಲೌಟಾಗಿದೆ.
ಕೆಣಕಿದ್ದು ಕಾನ್‌ಸ್ಟಾಸ್: ಬಲಿಯಾಗಿದ್ದು ಖವಾಜ!
ದಿನದಾಟದ ಕೊನೆ ಓವರ್ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಉಸ್ಮಾನ್ ಖವಾಜ ಕ್ರೀಸ್‌ನಲ್ಲಿದ್ದ ಬೂಮ್ರಾ ಬೌಲಿಂಗ್‌ಗೆ ರೆಡಿಯಾಗಿದ್ದರು. ಆದರೆ ಖವಾಜ ಸಿದ್ಧವಾಗಿರಲಿಲ್ಲ. ಇದಕ್ಕೆ ಬೂಮ್ರಾ ಅತೃಪ್ತಿ ವ್ಯಕ್ತಪಡಿಸಿದರು. ಈ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ 19 ವರ್ಷದ ಕಾನ್‌ಸ್ಟಾಸ್, ಬೂಮ್ರಾರನ್ನು ಕೆಣಕಿ ಏನನ್ನೋ ಹೇಳಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇಬ್ಬರನ್ನೂ ಅಂಪೈರ್ ಸಮಾಧಾನ ಪಡಿಸಿದರು. ಆದರೆ ಮುಂದಿನ ಎಸೆತದಲ್ಲೇ ಖವಾಜರನ್ನು ಬೂಮ್ರಾ ಔಟ್ ಮಾಡಿದರು. ಈ ವೇಳೆ ಬೂಮ್ರಾ ಮಾತ್ರವಲ್ಲದೇ ಭಾರತದ ಬಹುತೇಕ ಆಟಗಾರರು ಕಾನ್‌ಸ್ಟಾಸ್‌ರನ್ನು ಗುರಿಯಾಗಿಸಿ ಸಂಭ್ರಮಿಸಿದರು.
2024-25ರಲ್ಲಿ 8ನೇ ಸಲ 185ಕ್ಕಿಂತ ಕಡಿಮೆ ರನ್!
ಭಾರತ ತಂಡ 2024-25ರ ಆವೃತ್ತಿಯಲ್ಲಿ 8 ಬಾರಿ 185 ರನ್‌ಗಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಇದು ಆವೃತ್ತಿಯೊಂದರಲ್ಲಿ ಯಾವುದೇ ತಂಡಗಳ ಪೈಕಿ ಜಂಟಿ ಗರಿಷ್ಠ. ನ್ಯೂಜಿಲೆಂಡ್ 1958, ಆಸ್ಟ್ರೇಲಿಯಾ 1978/79, ವೆಸ್ಟ್‌ಇಂಡೀಸ್ 2000/01, ಬಾಂಗ್ಲಾದೇಶ 2001/02, ದಕ್ಷಿಣ ಆಫ್ರಿಕಾ 2015/16ರಲ್ಲಿ ತಲಾ 8 ಬಾರಿ 185ಕ್ಕಿಂತ ಕಡಿಮೆ ರನ್‌ಗೆ ಆಲೌಟಾಗಿತ್ತು.