ಸಾರಾಂಶ
ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಅಗ್ರ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯ ಪ್ರಶಸ್ತಿ ಮೂಲಕ ಗೌರವ ಸಲ್ಲಿಸಿದೆ. ಪ್ಯಾರಿಸ್ ಒಲಿಂಪಿಕ್ಸ್‌ನ ಡಬಲ್ ಪದಕ ವಿಜೇತೆ ಮನು ಭಾಕರ್, ಚೆಸ್ ವಿಶ್ವ ಚಾಂಪಿಯನ್ ಡಿ.ಗುಕೇಶ್ ಸೇರಿದಂತೆ ನಾಲ್ವರಿಗೆ ಕ್ರೀಡೆಯ ಅತ್ಯುನ್ನತ ಪ್ರಶಸ್ತಿಯಾಗಿರುವ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಘೋಷಿಸಿದೆ.
ಗುರುವಾರ ಸಚಿವಾಲಯ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿತು. ಒಲಿಂಪಿಕ್ಸ್‌ನ ಕಂಚು ವಿಜೇತ ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಪ್ಯಾರಾಲಿಂಪಿಕ್ಸ್‌ನ ಹೈ ಜಂಪ್ ಚಾಂಪಿಯನ್ ಪ್ರವೀಣ್ ಕುಮಾರ್ ಕೂಡಾ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ₹25 ಲಕ್ಷ ನಗದು ಬಹುಮಾನ ಹೊಂದಿದೆ.
32 ಅರ್ಜುನ ಸಾಧಕರು: ಕ್ರೀಡಾ ಸಚಿವಾಲಯ 17 ಮಂದಿ ಪ್ಯಾರಾ ಅಥ್ಲೀಟ್‌ಗಳು ಸೇರಿ 32 ಮಂದಿಗೆ ಅರ್ಜುನ ಪ್ರಶಸ್ತಿಯನ್ನೂ ಘೋಷಿಸಿದೆ. ಒಲಿಂಪಿಕ್ಸ್ ಪದಕ ಸಾಧಕರಾದ ಅಮನ್ ಶೆರಾವತ್, ಸ್ವಪ್ನಿಲ್ ಕುಸಾಲೆ, ಸರಬ್ಜೋತ್ ಸಿಂಗ್, ಹಾಕಿ ತಂಡದ ಆಟಗಾರರಾದ ಜರ್ಮನ್‌ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್, ಸಂಜಯ್, ಅಭಿಷೇಕ್‌ಗೆ ಪ್ರಶಸ್ತಿ ಒಲಿದಿದೆ.
ಓಟಗಾರ್ತಿ ಜ್ಯೋತಿ ಯರ್ರಾಜಿ, ಜಾವೆಲಿನ್ ತಾರೆ ಅನ್ನು ರಾಣಿ, ಈಜುಪಟು ಸಾಜನ್ ಪ್ರಕಾಶ್, ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಧರಂಭೀರ್, ನವ್‌ದೀಪ್ ಸಿಂಗ್, ನಿತೇಶ್ ಕುಮಾರ್, ರಾಕೇಶ್ ಕುಮಾರ್, ಮೋನಾ ಅಗರ್‌ವಾಲ್, ರುಬಿನ ಫ್ರಾನ್ಸಿಸ್ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜೀವಮಾನ ಅರ್ಜುನ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಪಟ್ಟಿಯನ್ನೂ ಸಚಿವಾಲಯ ಪ್ರಕಟಿಸಿದೆ.
ಜ.17ಕ್ಕೆ ಪ್ರದಾನ
ಜ.17ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಪ್ರಶಸ್ತಿ ವಿಜೇತರು
ಖೇಲ್ ರತ್ನ: ಗುಕೇಶ್(ಚೆಸ್), ಹರ್ಮನ್‌ಪ್ರೀತ್(ಹಾಕಿ), ಮನು ಭಾಕರ್(ಶೂಟಿಂಗ್), ಪ್ರವೀಣ್(ಪ್ಯಾರಾ ಅಥ್ಲೆಟಿಕ್ಸ್).
ಅರ್ಜುನ ಪ್ರಶಸ್ತಿ: ಜ್ಯೋತಿ, ಅನ್ನು ರಾಣಿ(ಅಥ್ಲೆಟಿಕ್ಸ್), ನೀತು, ಸ್ವೀಟಿ(ಬಾಕ್ಸಿಂಗ್), ವಂತಿಕಾ(ಚೆಸ್), ಸಲೀಮಾ, ಅಭಿಷೇಕ್, ಸಂಜಯ್, ಜರ್ಮನ್‌ಪ್ರೀತ್, ಸುಖ್‌ಜೀತ್(ಹಾಕಿ), ರಾಕೇಶ್(ಪ್ಯಾರಾ ಆರ್ಚರಿ), ಪ್ರೀತಿ ಪಾಲ್(ಪ್ಯಾರಾ ಅಥ್ಲೆಟಿಕ್ಸ್), ಜೀವಾಂಜಿ ದೀಪ್ತಿ, ಅಜೀತ್ ಸಿಂಗ್, ಸಚಿನ್ ಖಿಲಾರಿ, ಧರಂಭೀರ್, ಪ್ರಣವ್ ಸೂರ್ಮ, ಹೊಕಾಟೊ ಸೆಮಾ, ಸಿಮ್ರನ್, ನವ್‌ದೀಪ್(ಪ್ಯಾರಾ ಅಥ್ಲೆಟಿಕ್ಸ್), ನಿತೇಶ್, ತುಳಸಿಮತಿ, ನಿತ್ಯಶ್ರೀ, ಮನಿಶಾ ರಾಮದಾಸ್(ಪ್ಯಾರಾ ಬ್ಯಾಡ್ಮಿಂಟನ್), ಕಪಿಲ್ ಪಾರ್ಮರ್(ಪ್ಯಾರಾ ಜುಡೊ), ಮೋನಾ ಅಗರ್‌ವಾಲ್, ರುಬಿನಾ(ಪ್ಯಾರಾ ಶೂಟಿಂಗ್), ಸ್ವಪ್ನಿಲ್, ಸರಬ್‌ಜೋತ್(ಶೂಟಿಂಗ್), ಅಭಯ್(ಸ್ಕ್ವಾಶ್), ಸಾಜನ್ ಪ್ರಕಾಶ್(ಈಜು), ಅಮನ್(ಕುಸ್ತಿ).ಅರ್ಜುನ(ಜೀವಮಾನ ಸಾಧನೆ): ಸುಚಾ ಸಿಂಗ್(ಅಥ್ಲೆಟಿಕ್ಸ್), ಮುರಳಿಕಾಂತ್(ಪ್ಯಾರಾ ಈಜು).
ದ್ರೋಣಾಚಾರ್ಯ: ಶುಭಾಷ್ ರಾಣಾ(ಪ್ಯಾರಾ ಶೂಟಿಂಗ್), ದೀಪ್ತಿ ದೇಶಪಾಂಡೆ(ಶೂಟಿಂಗ್), ಸಂದೀಪ್(ಹಾಕಿ).
ದ್ರೋಣಾಚಾರ್ಯ(ಜೀವಮಾನ ಸಾಧನೆ): ಮುರಳೀಧರನ್(ಬ್ಯಾಡ್ಮಿಂಟನ್), ಅರ್ಮಾಂಡೊ ಆ್ಯಗ್ನೆಲೊ(ಫುಟ್ಬಾಲ್).