ಸಾರಾಂಶ
ಟ್ರ್ಯಾವಿಸ್ ಹೆಡ್ ಸ್ಫೋಟಕ ಸೆಂಚುರಿ, ಸ್ಟೀವ್ ಸ್ಮಿತ್ ಕ್ಲಾಸಿಕಲ್ ಆಟದ ನೆರವಿನಿಂದ ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ.
ಬ್ರಿಸ್ಬೇನ್: ಟ್ರ್ಯಾವಿಸ್ ಹೆಡ್ ಸ್ಫೋಟಕ ಸೆಂಚುರಿ, ಸ್ಟೀವ್ ಸ್ಮಿತ್ ಕ್ಲಾಸಿಕಲ್ ಆಟದ ನೆರವಿನಿಂದ ಭಾರತ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ. ಜಸ್‌ಪ್ರೀತ್ ಬೂಮ್ರಾ ಮಾರಕ ದಾಳಿ ಸಂಘಟಿಸಿದರೂ, ಇತರ ಬೌಲರ್‌ಗಳನ್ನು ಬೆಂಡತ್ತಿದ ಆಸ್ಟ್ರೇಲಿಯಾ 2ನೇ ದಿನದಂತ್ಯಕ್ಕೆ 101 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ. ಬ್ಯಾಟಿಂಗ್ ಸ್ನೇಹಿಯಾಗಿ ಬದಲಾಗಿರುವ ಪಿಚ್‌ನಲ್ಲಿ ಆಸೀಸ್ ಸೋಮವಾರ ಮತ್ತಷ್ಟು ರನ್ ಸೇರಿಸುವ ಕಾತರದಲ್ಲಿದ್ದರೆ, ಬೇಗನೇ ಆತಿಥೇಯರನ್ನು ಆಲೌಟ್ ಮಾಡಿ ಪಂದ್ಯದ ಮೇಲಿನ ಹಿಡಿತ ಜಾರದಂತೆ ನೋಡಿಕೊಳ್ಳಲು ಭಾರತ ಕಾಯುತ್ತಿದೆ.
ಮಳೆಯಿಂದಾಗಿ ಮೊದಲ ದಿನ ಕೇವಲ 13.2 ಓವರ್ ಆಟ ನಡೆದಿತ್ತು. 2ನೇ ದಿನವೂ ಮಳೆ ಮುನ್ಸೂಚನೆ ಇತ್ತಾದರೂ, ಪಂದ್ಯಕ್ಕೆ ಮಳೆ ಅಡ್ಡಿಪಡಿಸಲಿಲ್ಲ. ನಿಗದಿತ ಸಮಯಕ್ಕೆ ಆರಂಭಗೊಂಡ ದಿನದಾಟದ ಮೊದಲ ಅವಧಿಯಲ್ಲಿ ಭಾರತ ಮೇಲುಗೈ ಸಾಧಿಸಿತು. ಉಸ್ಮಾನ್ ಖವಾಜ(21), ಮೆಕ್‌ಸ್ವೀನಿ(09)ಗೆ ಬೂಮ್ರಾ ಪೆವಿಲಿಯನ್ ಹಾದಿ ತೋರಿದರೆ, 12 ರನ್ ಗಳಿಸಿದ್ದ ಮಾರ್ನಸ್ ಲಬುಶೇನ್‌ರನ್ನು ನಿತೀಶ್ ರಾಣಾ ಔಟ್ ಮಾಡಿದರು. 75ಕ್ಕೆ 3 ವಿಕೆಟ್ ಕಳೆದುಕೊಂಡ ತಂಡ ಸಂಕಷ್ಟದಲ್ಲಿತ್ತು.
ಹೆಡ್-ಸ್ಮಿತ್ ಆಡಿದ್ದೇ ಆಟ: ಊಟದ ವಿರಾಮದ ವೇಳೆ 3 ವಿಕೆಟ್‌ಗೆ 104 ರನ್ ಗಳಿಸಿದ್ದ ಆಸೀಸ್ 2ನೇ ಅವಧಿಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಹೆಚ್ಚಿನ ವೇಗ ಹಾಗೂ ಸ್ವಿಂಗ್‌ಗಳು ಇಲ್ಲದ ಭಾರತೀಯ ಬೌಲಿಂಗ್‌ಅನ್ನು ಚೆನ್ನಾಗಿ ಉಪಯೋಗಿಸಿದ ಹೆಡ್ ಹಾಗೂ ಸ್ಮಿತ್ ಲೀಲಾಜಾಲವಾಗಿ ಬ್ಯಾಟ್ ಬೀಸಿದರು. ಬೂಮ್ರಾ ಹೊರತುಪಡಿಸಿ ಇತರ ಬೌಲರ್‌ಗಳು ಆಸೀಸ್ ಜೋಡಿಯನ್ನು ಕಾಡಲಿಲ್ಲ.
ಅಡಿಲೇಡ್‌ನಲ್ಲಿ ಅಬ್ಬರದ 140 ರನ್ ಸಿಡಿಸಿದ್ದ ಹೆಡ್, ಈ ಪಂದ್ಯದಲ್ಲೂ ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿದರು. ಅವರು 160 ಎಸೆತಗಳಲ್ಲಿ 18 ಬೌಂಡರಿಯೊಂದಿಗೆ 152 ರನ್ ಸಿಡಿಸಿದರೆ, ಒಂದೂವರೆ ವರ್ಷದಿಂದಲೂ ಲಯ ಕಂಡುಕೊಳ್ಳಲು ಪರದಾಡುತ್ತಿದ್ದ ಸ್ಟೀವ್ ಸ್ಮಿತ್ 190 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 101 ರನ್ ಬಾರಿಸಿದರು. ಬರೋಬ್ಬರಿ 50 ಓವರ್ ಜೊತೆಯಾಟವಾಡಿದ ಈ ಜೋಡಿ 241 ರನ್ ಸೇರಿಸಿ, ಭಾರತಕ್ಕೆ ಬಲವಾದ ಹೊಡೆತ ನೀಡಿತು. ಆದರೆ ಇನ್ನಿಂಗ್ಸ್‌ನ 83ನೇ ಓವರ್‌ನಲ್ಲಿ ಸ್ಮಿತ್, 87ನೇ ಓವರ್‌ನಲ್ಲಿ ಹೆಡ್, ಮಿಚೆಲ್ ಮಾರ್ಷ್‌ರನ್ನು ಔಟ್ ಮಾಡಿದ ಬೂಮ್ರಾ ಭಾರತದ ಪಾಳಯದಲ್ಲಿ ಮತ್ತೆ ಸಂಭ್ರಮಕ್ಕೆ ಕಾರಣರಾದರು. ಇನ್ನೇನು ಆತಿಥೇಯರನ್ನು ಬೇಗನೇ ಆಲೌಟ್ ಮಾಡಬಹುದು ಅಂದುಕೊಂಡಿದ್ದ ಭಾರತವನ್ನು ನಾಯಕ ಕಮಿನ್ಸ್ ಹಾಗೂ ಅಲೆಕ್ಸ್ ಕೇರಿ ಕಾಡಿದರು. ಈ ಜೋಡಿ 7ನೇ ವಿಕೆಟ್‌ಗೆ 58 ರನ್ ಸೇರಿಸಿತು. ಕಮಿನ್ಸ್ 20ಕ್ಕೆ ವಿಕೆಟ್ ಒಪ್ಪಿಸಿದರೂ, ಕೇರಿ 47 ಎಸೆತಗಳಲ್ಲಿ 45 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಂಡದ ಎಲ್ಲಾ ಹೊರೆ ತನ್ನ ಮೇಲಿರುವಂತೆ ಆಡಿದ ಬೂಮ್ರಾ 72 ರನ್‌ಗೆ 5 ವಿಕೆಟ್ ಪಡೆದರು. ನಿತೀಶ್ ಕುಮಾರ್ ಹಾಗೂ ಸಿರಾಜ್ ತಲಾ 1 ವಿಕೆಟ್ ಕಿತ್ತರು.
ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 405/7 (2ನೇ ದಿನದಂತ್ಯಕ್ಕೆ) (ಹೆಡ್ 152, ಸ್ಮಿತ್ 101, ಕೇರಿ ಔಟಾಗದೆ 45, ಬೂಮ್ರಾ 5-72, ನಿತೀಶ್ 1-65, ಸಿರಾಜ್ 1-97)
ಜಹೀರ್, ಇಶಾಂತ್ ಶರ್ಮಾ
ದಾಖಲೆ ಮುರಿದ ಬೂಮ್ರಾ
ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬಾರಿ 5+ ವಿಕೆಟ್ ಕಿತ್ತ ಭಾರತೀಯ ವೇಗಿಗಳ ಪಟ್ಟಿಯಲ್ಲಿ ಬೂಮ್ರಾ 2ನೇ ಸ್ಥಾನಕ್ಕೇರಿದರು. ಅವರು 12 ಬಾರಿ ಈ ಸಾಧನೆ ಮಾಡಿದ್ದು, ತಲಾ 11 ಬಾರಿ 5+ ವಿಕೆಟ್ ಕಿತ್ತಿದ್ದ ಜಹೀರ್ ಖಾನ್ ಹಾಗೂ ಇಶಾಂತ್ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ. ಕಪಿಲ್ ದೇವ್(23 ಬಾರಿ) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಆಸೀಸ್ ಪರ ಗರಿಷ್ಠ ಶತಕ:
2ನೇ ಸ್ಥಾನಕ್ಕೇರಿದ ಸ್ಮಿತ್
ಆಸ್ಟ್ರೇಲಿಯಾ ಪರ ಟೆಸ್ಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಮಿತ್ 2ನೇ ಸ್ಥಾನಕ್ಕೇರಿದ್ದಾರೆ. ಅವರು 33 ಶತಕ ಬಾರಿಸಿದ್ದು, ಸ್ಟೀವ್ ವಾ(32 ಶತಕ) ಅವರನ್ನು ಹಿಂದಿಕ್ಕಿದ್ದಾರೆ. ರಿಕಿ ಪಾಂಟಿಂಗ್ 41 ಶತಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತ ವಿರುದ್ಧ 10
ಶತಕ: ಸ್ಮಿತ್ ದಾಖಲೆ
ಟೆಸ್ಟ್‌ನಲ್ಲಿ ಭಾರತ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅವರು 41 ಇನ್ನಿಂಗ್ಸ್‌ಗಳಲ್ಲಿ 10 ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ ಕೂಡಾ 10 ಶತಕ(55 ಇನ್ನಿಂಗ್ಸ್) ಸಿಡಿಸಿದ್ದಾರೆ. ವೆಸ್ಟ್‌ಇಂಡೀಸ್‌ನ ಗ್ಯಾರಿ ಸೋಬರ್ಸ್, ರಿಚರ್ಡ್ಸ್, ಆಸ್ಟ್ರೇಲಿಯಾದ ಪಾಂಟಿಂಗ್ ತಲಾ 8 ಶತಕ ಗಳಿಸಿದ್ದಾರೆ.
02 ಬಾರಿ
ಹೆಡ್-ಸ್ಮಿತ್ ಭಾರತ ವಿರುದ್ಧ ಟೆಸ್ಟ್‌ನಲ್ಲಿ 2ನೇ ಬಾರಿ 200+ ರನ್ ಜೊತೆಯಾಟವಾಡಿದರು. ರಿಕಿ ಪಾಂಟಿಲ್-ಕ್ಲಾರ್ಕ್ 3 ಬಾರಿ ಈ ಸಾಧನೆ ಮಾಡಿದ್ದಾರೆ.
01 ಬಾರಿ
ಆಸ್ಟ್ರೇಲಿಯಾ 2015ರ ಬಳಿಕ ಇದೇ ಮೊದಲ ಬಾರಿ ಭಾರತ ವಿರುದ್ಧ ತವರಿನ ಟೆಸ್ಟ್‌ನಲ್ಲಿ 400+ ರನ್ ಕಲೆಹಾಕಿತು.
150 ಔಟ್: ಧೋನಿ, ಕಿರ್ಮಾನಿ
ಪಟ್ಟಿಗೆ ಸೇರಿದ ರಿಷಭ್ ಪಂತ್
ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟಂಪಿಂಗ್ ಮತ್ತು ಕ್ಯಾಚ್ ಮೂಲಕ 150ಕ್ಕಿಂತ ಹೆಚ್ಚು ಬಾರಿ ಬ್ಯಾಟರ್‌ಗಳನ್ನು ಔಟ್ ಮಾಡಲು ನೆರವಾದ ಸಾಧಕರ ಪಟ್ಟಿಗೆ ರಿಷಭ್ ಪಂತ್ ಸೇರ್ಪಡೆಗೊಂಡಿದ್ದಾರೆ. ಅವರು 135 ಕ್ಯಾಚ್ ಪಡೆದಿದ್ದರೆ, 15 ಸ್ಟಂಪಿಂಗ್ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 3ನೇ ವಿಕೆಟ್ ಕೀಪರ್. ಎಂ.ಎಸ್.ಧೋನಿ 294, ಸಯ್ಯದ್ ಕಿರ್ಮಾನಿ 198 ಬಾರಿ ಈ ಸಾಧನೆ ಮಾಡಿದ್ದಾರೆ. ಇನ್ನು, ಕಿರಣ್ ಮೋರೆ 130, ನಯನ್ ಮೋಂಗಿಯಾ 107 ಬಾರಿ ಬ್ಯಾಟರ್‌ಗಳನ್ನು ಔಟ್ ಮಾಡಲು ನೆರವಾಗಿದ್ದಾರೆ.