ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್‌ : ಬ್ರಿಸ್ಬೇನ್‌ನಲ್ಲಿ ಮೊದಲ ದಿನ ಮಳೆಯದ್ದೇ ಆಟ

| Published : Dec 15 2024, 02:00 AM IST / Updated: Dec 15 2024, 04:13 AM IST

ಸಾರಾಂಶ

ಪಂದ್ಯಕ್ಕೆ ವರುಣನ ಕಾಟ. ನಿರಂತರ ಮಳೆ, ಮೊದಲ ದಿನ ಕೇವಲ 13.2 ಓವರ್‌ ಆಟ. ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಗಳಿಸಿದ ಆಸ್ಟ್ರೇಲಿಯಾ. ಮುಂದಿನ ನಾಲ್ಕೂ ದಿನವೂ ಮಳೆ ಅಡ್ಡಿಯಾಗುವ ಸಾಧ್ಯತೆ

ಬ್ರಿಸ್ಬೇನ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‌ಗೆ ನಿರೀಕ್ಷೆಯಂತೆಯೇ ಮಳೆ ಅಡ್ಡಿಪಡಿಸಿದೆ. ಬ್ರಿಸ್ಬೇನ್‌ನ ಗಾಬಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭಗೊಂಡ ಪಂದ್ಯದ ಮೊದಲ ದಿನದಾಟವನ್ನು ಮಳೆ ಬಲಿ ಪಡೆದುಕೊಂಡಿದೆ.

ಹಲವು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಮೊದಲ ದಿನ ಕೇವಲ 13.2 ಓವರ್‌ ಆಟ ಸಾಧ್ಯವಾಯಿತು. ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 38 ರನ್‌ ಗಳಿಸಿದೆ. ಜಸ್‌ಪ್ರೀತ್‌ ಬೂಮ್ರಾ, ಸಿರಾಜ್‌ ಹಾಗೂ ಆಕಾಶ್‌ದೀಪ್‌ರ ಆರಂಭಿಕ ಸ್ಪೆಲ್‌ಗಳನ್ನು ಸಮರ್ಥವಾಗಿ ಎದುರಿಸಿದ ಉಸ್ಮಾನ್‌ ಖವಾಜ 47 ಎಸೆತಗಳಲ್ಲಿ ಔಟಾಗದೆ 19, ಮೆಕ್‌ಸ್ವೀನಿ 33 ಎಸೆತಗಳಲ್ಲಿ 4 ರನ್‌ ಗಳಿಸಿದ್ದಾರೆ.

ಟಾಸ್‌ ವೇಳೆ ವಾತಾವರಣ ತಿಳಿಯಾಗಿತ್ತು. ನಿಗದಿಯಂತೆ ಭಾರತೀಯ ಕಾಲಮಾನ ಬೆಳಗ್ಗೆ 5.50ಕ್ಕೆ ಪಂದ್ಯ ಆರಂಭಗೊಂಡಿತು. ಆದರೆ 5.3 ಓವರ್‌ ಬಳಿಕ ಮಳೆ ಸುರಿಯಲಾರಂಭಿಸಿತು. 5 ನಿಮಿಷಗಳ ಬಳಿಕ ಮಳೆ ನಿಂತಿತು. ಅರ್ಧ ಗಂಟೆ ಸ್ಥಗಿತಗೊಂಡಿದ್ದ ಪಂದ್ಯ ಬಳಿಕ 6.45ಕ್ಕೆ ಪುನಾರಂಭಗೊಂಡಿತು.13.2 ಓವರ್‌ ಆಗಿದ್ದಾಗ ಮತ್ತೆ ಮಳೆ ಸುರಿಯಲಾರಂಭಿಸಿತು.

 ಬೆಳಗ್ಗೆ 7.21ಕ್ಕೆ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯಿತು. ನಡು ನಡುವೆ ಮಳೆ ನಿಂತರೂ, ಪಂದ್ಯ ಪುನಾರಂಭಿಸಲು ಸಾಧ್ಯವಾಗಲಿಲ್ಲ. ಧಾರಾಕಾರ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿದ್ದ ಕಾರಣ ಭಾರತೀಯ ಕಾಲಮಾನ ಬೆಳಗ್ಗೆ 11.45ಕ್ಕೆ ದಿನದಾಟವನ್ನು ಕೊನೆಗೊಳಿಸಿದ್ದಾಗಿ ಘೋಷಿಸಲಾಯಿತು. ಓವರ್‌ಗಳು ಕಡಿತಗೊಂಡಿರುವ ಕಾರಣ ಇನ್ನುಳಿದ ದಿನದಾಟ ಭಾರತೀಯ ಕಾಲಮಾನ ಬೆಳಗ್ಗೆ 5.20ಕ್ಕೆ ಆರಂಭಗೊಳ್ಳಲಿದೆ.

ಕೃಪೆ ತೋರುವನೇ ಮಳೆರಾಯ?

ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಬ್ರಿಸ್ಬೇನ್‌ನಲ್ಲಿ ಇನ್ನೂ ಕೆಲ ದಿನಗಳ ಕಾಲ ಭಾರಿ ಮಳೆಯಾಗಲಿದೆ. ಇದರಿಂದಾಗಿ ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚು. 2, 3 ಮತ್ತು 4ನೇ ದಿನವೂ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಪಂದ್ಯ ಸುಗಮವಾಗಿ ನಡೆಯುವ ನಿರೀಕ್ಷೆಯಿಲ್ಲ. 

ಫೀಲ್ಡಿಂಗ್‌ ಆಯ್ಕೆ: ರೋಹಿತ್‌ ಶರ್ಮಾ ನಿರ್ಧಾರಕ್ಕೆ ಅಚ್ಚರಿ

ಪಂದ್ಯದಲ್ಲಿ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಭಾರತದ ನಾಯಕ ರೋಹಿತ್‌ ಶರ್ಮಾ ಅವರ ನಿರ್ಧಾರಕ್ಕೆ ಕೆಲ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್‌, ಬ್ಯಾಟಿಂಗ್‌ ಆಯ್ದುಕೊಂಡಿದ್ದರೆ ಅದು ಉತ್ತಮ ನಿರ್ಧಾರವಾಗಿರುತ್ತಿತ್ತು ಎಂದಿದ್ದಾರೆ. ಪಂದ್ಯದ ಮೊದಲೆರಡು ದಿನ ಪಿಚ್‌ ಬ್ಯಾಟರ್‌ಗಳಿಗೆ ನೆರವಾಗಬಹುದು. ಬಳಿಕ ಪಿಚ್‌ ಬಿರುಕು ಬಿಡಬಹುದು ಎಂದು ಅವರು ಅಂದಾಜಿಸಿದ್ದಾರೆ. ಇನ್ನು, ಇಂಗ್ಲೆಂಡ್‌ ಮಾಜಿ ಆಟಗಾರ ಮೈಕಲ್‌ ವಾನ್‌ ಕೂಡಾ ರೋಹಿತ್‌ ನಿರ್ಧಾರವನ್ನು ಟೀಕಿಸಿದ್ದಾರೆ. ಟಾಸ್‌ ಗೆಲ್ಲದೆ ಪ್ಯಾಟ್‌ ಕಮಿನ್ಸ್‌ ಖುಷಿಯಾಗಿರಬಹುದು ಎಂದಿದ್ದಾರೆ.