ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಇತಿಹಾಸದಲ್ಲೇ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಳ್ಳುವ ಕಾತರದಲ್ಲಿದ್ದ ಲಕ್ಷ್ಯ ಸೇನ್ ಕನಸು ಭಗ್ನಗೊಂಡಿದೆ. ಭಾನುವಾರ 22 ವರ್ಷದ ಸೇನ್ ಅವರು ಹಾಲಿ ಒಲಿಂಪಿಕ್ ಚಾಂಪಿಯನ್, ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್ಸನ್ ವಿರುದ್ಧ 20-22, 14-21 ಗೇಮ್‌ಗಳಲ್ಲಿ ವೀರೋಚಿತ ಸೋಲು ಕಂಡರು.
ಎರಡೂ ಗೇಮ್‌ಗಳಲ್ಲಿ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಹೊರತಾಗಿಯೂ ಸೇನ್‌ಗೆ ಗೆಲುವಾಗಲಿಲ್ಲ. ಮೊದಲ ಗೇಮ್‌ನಲ್ಲಿ ಒಂದು ಹಂತದಲ್ಲಿ 17-11ರಲ್ಲಿ ಮುಂದಿದ್ದ ಸೇನ್, ಬಳಿಕ ಗೇಮ್ ಪಾಯಿಂಟ್‌ವರೆಗೂ ತಲುಪಿದ್ದರು. ಆದರೆ 3 ಗೇಮ್ ಪಾಯಿಂಟ್ ಉಳಿಸಿ ಗೆದ್ದ ವಿಕ್ಟರ್ 1-0 ಮುನ್ನಡೆ ಸಾಧಿಸಿದರು. 2ನೇ ಗೇಮ್‌ನ ಆರಂಭದಲ್ಲಿ ಸೇನ್ 7-0 ಅಂಕಗಳಿಂದ ಮುಂದಿದ್ದರೂ ಬಳಿಕ ಪುಟಿದೆದ್ದ ವಿಕ್ಟರ್, ಸೇನ್ ಮೇಲೆ ಸವಾರಿ ಮಾಡಿ ಪಂದ್ಯ ಗೆದ್ದು ಸತತ 3ನೇ ಒಲಿಂಪಿಕ್ಸ್ ಪದಕ ಖಚಿತಪಡಿಸಿಕೊಂಡರು.
ಸೇನ್‌ಗೆ ಇದೆ ಕಂಚು ಗೆಲ್ಲುವ ಅವಕಾಶ
ಸೆಮೀಸ್‌ನಲ್ಲಿ ಸೋತರೂ ಸೇನ್ ಸೋಮವಾರ ಕಂಚಿನ ಪದಕಕ್ಕಾಗಿ ಏಷ್ಯನ್ ಚಾಂಪಿಯನ್‌ಶಿಪ್ ವಿಜೇತ, ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ ಸೆಣಸಲಿದ್ದಾರೆ. ಇದರಲ್ಲಿ ಸೇನ್ ಗೆದ್ದರೆ, ಒಲಿಂಪಿಕ್ಸ್ ಪದಕ ಜಯಿಸಿದ ಭಾರತದ ಮೊದಲ ಪುರುಷ ಶಟ್ಲರ್ ಎನಿಸಿಕೊಳ್ಳಲಿದ್ದಾರೆ. ಸೈನಾ ನೆಹ್ವಾಲ್ 2012ರಲ್ಲಿ ಕಂಚು, ಪಿ.ವಿ.ಸಿಂಧು 2016ರಲ್ಲಿ ಬೆಳ್ಳಿ, 202ರಲ್ಲಿ ಕಂಚು ಗೆದ್ದಿದ್ದರು.