ಸಾರಾಂಶ
ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ರೇಸ್‌ನಿಂದ ಹೊರಬಿದ್ದ ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ರವಿ ದಹಿಯಾ. ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಆಯೋಜಿಸಿದ್ದ ಆಯ್ಕೆ ಟ್ರಯಲ್ಸ್‌ನಲ್ಲಿ ತಾರಾ ಕುಸ್ತಿಪಟುಗಳಿಬ್ಬರಿಗೂ ಸೋಲು.
ಸೋನೆಪತ್: ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೂನಿಯಾ ಹಾಗೂ ರವಿ ದಹಿಯಾ, 2024ರ ಪ್ಯಾರಿಸ್ ಒಲಿಂಪಿಕ್ಸ್ ಆಯ್ಕೆ ರೇಸ್‌ನಿಂದ ಹೊರಬಿದ್ದಿದ್ದಾರೆ. ಭಾನುವಾರ ನಡೆದ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಇಬ್ಬರೂ ಸೋಲುಂಡರು.ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಜರಂಗ್, 65 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸೆಮಿಫೈನಲ್‌ನಲ್ಲಿ ರೋಹಿತ್ ಕುಮಾರ್ ವಿರುದ್ಧ 1-9ರಲ್ಲಿ ಸೋಲುಂಡರು.
ಈ ಟ್ರಯಲ್ಸ್‌ಗೋಸ್ಕರ ಬಜರಂಗ್ ಕಳೆದ ಒಂದು ತಿಂಗಳಿಂದ ರಷ್ಯಾದಲ್ಲಿ ಅಭ್ಯಾಸ ನಡೆಸಿದ್ದರು. ಕಳೆದ ವಾರ ಡಬ್ಲ್ಯುಎಫ್‌ಐನ ಚುನಾಯಿತ ಸಮಿತಿ ಟ್ರಯಲ್ಸ್ ನಡೆಸಬಾರದು ಎಂದು ದೆಹಲಿ ಹೈಕೋರ್ಟ್‌ನಲ್ಲಿ ಬಜರಂಗ್ ಸಲ್ಲಿಸಿದ್ದ ಅರ್ಜಿ ಪುರಸ್ಕಾರಗೊಂಡಿತ್ತು. ಹೈಕೋರ್ಟ್ ಸೂಚನೆಯಂತೆ ತಾತ್ಕಾಲಿಕ ಆಡಳಿತ ಸಮಿತಿಯೇ ಟ್ರಯಲ್ಸ್ ಆಯೋಜಿಸಿತ್ತು.ವಿಪರ್ಯಾಸ ಎಂದರೆ, ಟೋಕಿಯೋ ಒಲಿಂಪಿಕ್ಸ್‌ಗೆ ಬಜರಂಗ್‌ಗೆ ನೇರ ಪ್ರವೇಶ ನೀಡಿದ್ದನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿ ಸೋಲನುಭವಿಸಿದ್ದ ಸುಜೀತ್ ಕಲಕಲ್, 65 ಕೆ.ಜಿ. ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸೆಣಸಲಿದ್ದಾರೆ. ಸುಜೀತ್ ಫೈನಲ್‌ನಲ್ಲಿ ರೋಹಿತ್ ವಿರುದ್ಧ ಗೆದ್ದರು.
ಇನ್ನು ರವಿ ದಹಿಯಾ 57 ಕೆ.ಜಿ. ವಿಭಾಗದ ಸೆಮೀಸ್‌ನಲ್ಲಿ ಅಮನ್ ಶೆರಾವತ್ ವಿರುದ್ಧ ಸೋಲುಂಡರು.