ಸಾರಾಂಶ
ಡಲ್ಲಾಸ್: ಬದ್ಧವೈರಿಗಳಾದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟಿ20 ವಿಶ್ವಕಪ್ ಮುಖಾಮುಖಿ ಭಾರೀ ರೋಚಕ ಅಂತ್ಯ ಕಂಡಿದೆ. ಲೋ ಸ್ಕೋರಿಂಗ್ ಪಂದ್ಯದಲ್ಲಿ ಬಾಂಗ್ಲಾ 2 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಸತತ 2ನೇ ಸೋಲು ಕಂಡಿರುವ ಲಂಕಾ ‘ಡಿ’ ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದು, ಗುಂಪು ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ.
ಶನಿವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ, 20 ಓವರಲ್ಲಿ 9 ವಿಕೆಟ್‌ಗೆ ಕೇವಲ 124 ರನ್ ಕಲೆಹಾಕಿತು. ಆರಂಭಿಕ ಬ್ಯಾಟರ್ ಪಥುಂ ನಿಸ್ಸಾಂಕ 47, ಧನಂಜಯ ಡಿ ಸಿಲ್ವಾ 21 ಹೊರತುಪಡಿಸಿ ಉಳಿದವರ್‍ಯಾರೂ 20 ರನ್ ದಾಟಲಿಲ್ಲ. ಸುಲಭ ಗುರಿ ಬೆನ್ನತ್ತಿದ ಬಾಂಗ್ಲಾ, 28 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಬಳಿಕ 4ನೇ ವಿಕೆಟ್‌ಗೆ ಲಿಟನ್ ದಾಸ್ (36) ಹಾಗೂ ತೌಹಿದ್ ಹೃದೋಯ್(40) ಜೊತೆಗೂಡಿ 63 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು.ಆದರೆ, 22 ರನ್‌ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡ ಬಾಂಗ್ಲಾ, ಸೋಲಿನತ್ತ ಮುಖ ಮಾಡಿತ್ತು. ಅನುಭವಿ ಮಹ್ಮುದುಲ್ಲಾ ಔಟಾಗದೆ 16 ರನ್ ಗಳಿಸಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು.
ಸ್ಕೋರ್: ಲಂಕಾ 20 ಓವರಲ್ಲಿ 124/9 (ನಿಸ್ಸಾಂಕ 47, ಧನಂಜಯ 21, ಮುಸ್ತಾಫಿಜುರ್ 3-17, ರಿಶಾದ್ 3-22), ಬಾಂಗ್ಲಾ 19 ಓವರಲ್ಲಿ 125/8 (ತೌಹಿದ್ 40, ಲಿಟನ್ 36, ತುಷಾರ 4-18) ಪಂದ್ಯಶ್ರೇಷ್ಠ: ರಿಶಾದ್ ಹೊಸೈನ್