ಟೆಸ್ಟ್‌ ಆಡುವವರಿಗೆ ಬಂಪರ್‌: ಭಾರತದ ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ ಬಿಸಿಸಿಐ

| Published : Mar 10 2024, 01:33 AM IST / Updated: Mar 10 2024, 10:36 AM IST

ಟೆಸ್ಟ್‌ ಆಡುವವರಿಗೆ ಬಂಪರ್‌: ಭಾರತದ ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ ಬಿಸಿಸಿಐ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ತಾರೆಗಳಾದ ಇಶಾನ್‌, ಶ್ರೇಯಸ್‌, ದೀಪಕ್‌ ಸೇರಿ ಕೆಲ ಆಟಗಾರರು ಟೆಸ್ಟ್‌, ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿದ ಬಗ್ಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ, ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿದೆ.

ನವದೆಹಲಿ: ಬಿಸಿಸಿಐ ನುಡಿದಂತೆ ನಡೆದಿದೆ. 2022-23ರ ಕ್ರಿಕೆಟ್‌ ಋತುವಿನಿಂದಲೇ ಅನ್ವಯವಾಗುವಂತೆ, ಆಟಗಾರರು ಋತುವೊಂದರಲ್ಲಿ ಕನಿಷ್ಠ 7 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನಾಡಿದರೆ, ಪ್ರತಿ ಪಂದ್ಯಕ್ಕೆ ಈಗಿರುವ 15 ಲಕ್ಷ ರು. ಸಂಭಾವನೆ ಜೊತೆಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರು. ಬೋನಸ್‌ ಸಿಗಲಿದೆ.

ಉದಾಹರಣೆಗೆ ಒಬ್ಬ ಆಟಗಾರ ಒಂದು ಋತುವಿನಲ್ಲಿ 10 ಟೆಸ್ಟ್‌ಗಳನ್ನು ಆಡಿದರೆ, ಆತನಿಗೆ ₹1.5 ಕೋಟಿ ಜೊತೆ ಬೋನಸ್‌ ರೂಪದಲ್ಲಿ ₹4.5 ಕೋಟಿ ಸೇರಿ ಒಟ್ಟು ₹6 ಕೋಟಿ ಸಿಗಲಿದೆ. 

ಇದರ ಜೊತೆಗೆ ಕೇಂದ್ರ ಗುತ್ತಿಗೆಯ ನಿಗದಿತ ವೇತನವೂ ಸಿಗಲಿದೆ. ರೋಹಿತ್‌ ಶರ್ಮಾ 2023-24ರ ಋತುವಿನಲ್ಲಿ ಭಾರತ ಆಡಿರುವ ಎಲ್ಲಾ 10 ಟೆಸ್ಟ್‌ಗಳಲ್ಲಿ ಆಡಿದ್ದಾರೆ. 

ಅವರಿಗೆ ₹6 ಕೋಟಿ ಪ್ಲಸ್‌ ಕೇಂದ್ರ ಗುತ್ತಿಗೆಯಲ್ಲಿ ‘ಎ+’ ದರ್ಜೆಯಲ್ಲಿರುವ ಕಾರಣ ₹7 ಕೋಟಿ ಸೇರಿ ಒಟ್ಟು ₹13 ಕೋಟಿ ಸಿಗಲಿದೆ. ಇದಲ್ಲದೇ ಪ್ರತಿ ಏಕದಿನ ಪಂದ್ಯಕ್ಕೆ ತಲಾ ₹8 ಲಕ್ಷ, ಪ್ರತಿ ಅಂ.ರಾ.ಟಿ20 ಪಂದ್ಯಕ್ಕೆ ₹4 ಲಕ್ಷ ಸಂಭಾವನೆ ಸಿಗಲಿದೆ.

ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಸೇರಿ ಇನ್ನೂ ಕೆಲ ಆಟಗಾರರು ಟೆಸ್ಟ್‌, ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿ ಐಪಿಎಲ್‌ಗೆ ಪ್ರಾಮುಖ್ಯತೆ ನೀಡಿದ ಬೆನ್ನಲ್ಲೇ, ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ಒಂದು ಋತುವಿನಲ್ಲಿ ಕನಿಷ್ಠ 9 ಟೆಸ್ಟ್‌ಗಳು ನಡೆಯಲಿದ್ದು, ಒಬ್ಬ ಆಟಗಾರ 4 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇದ್ದರೆ ಆತನಿಗೆ ಈಗಿರುವಂತೆಯೇ ಪ್ರತಿ ಪಂದ್ಯಕ್ಕೆ ₹15 ಲಕ್ಷ ಸಿಗಲಿದೆ. ಮೀಸಲು ಆಟಗಾರನಾಗಿದ್ದರೆ ₹7.5 ಲಕ್ಷ ಸಿಗಲಿದೆ. ಈ ಆಟಗಾರರಿಗೆ ಬೋನಸ್‌ ಸಿಗುವುದಿಲ್ಲ.

ಒಂದು ವೇಳೆ ಆಟಗಾರನೊಬ್ಬ ಋತುವೊಂದರಲ್ಲಿ ಕನಿಷ್ಠ 5 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದರೆ ಆತನಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರು. ಸಂಭಾವನೆ ಜೊತೆ ಪ್ರತಿ ಪಂದ್ಯಕ್ಕೆ ₹30 ಲಕ್ಷ ಬೋನಸ್‌ ದೊರೆಯಲಿದೆ. ಮೀಸಲು ಆಟಗಾರನಾಗಿದ್ದರೆ ₹7.5 ಲಕ್ಷ ಸಂಭಾವನೆ ಹಾಗೂ ₹15 ಲಕ್ಷ ರು. ಬೋನಸ್‌ ಸಿಗಲಿದೆ.

ಇನ್ನು ಆಟಗಾರ ಕನಿಷ್ಠ 7 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇದ್ದರೆ ಆತನಿಗೆ ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್‌, ಮೀಸಲು ಆಟಗಾರನಾಗಿದ್ದರೆ ₹22.5 ಲಕ್ಷ ಬೋನಸ್‌ ಸಿಗಲಿದೆ ಎಂದು ಜಯ್‌ ಶಾ ಮಾಹಿತಿ ನೀಡಿದ್ದಾರೆ.