ಮತ್ತೆ ಶುರುವಾಗಲಿದೆಯೇ ಚಾಂಪಿಯನ್ಸ್‌ ಲೀಗ್‌ ಟಿ 20?

| Published : Apr 03 2024, 01:31 AM IST / Updated: Apr 03 2024, 04:10 AM IST

ಸಾರಾಂಶ

10 ವರ್ಷಗಳ ಹಿಂದೆ ನಡೆದಿದ್ದ, ವಿವಿಧ ದೇಶಗಳ ಟಿ20 ಫ್ರಾಂಚೈಸಿ ತಂಡಗಳು ಸೇರಿ ಆಡುವ ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿಯನ್ನು ಮತ್ತೆ ಆರಂಭಿಸಲು ಬಿಸಿಸಿಐ, ಕ್ರಿಕೆಟ್‌ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಗಂಭೀರ ಚರ್ಚೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.  

ಮುಂಬೈ: ಬಿಸಿಸಿಐ, ಕ್ರಿಕೆಟ್‌ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಚಾಂಪಿಯನ್ಸ್‌ ಲೀಗ್‌ ಟಿ20 ಟೂರ್ನಿಯನ್ನು ಪುನಾರಂಭಿಸಲು ಗಂಭೀರ ಚಿಂತನೆ ನಡೆಸಿವೆ.2009ರಲ್ಲಿ ಆರಂಭಗೊಂಡಿದ್ದ ಟೂರ್ನಿಯು 2014ರಲ್ಲಿ ಕೊನೆಯ ಬಾರಿಗೆ ನಡೆದಿತ್ತು. ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌ ಹಾಗೂ ನ್ಯೂಜಿಲೆಂಡ್‌ನ ತಂಡಗಳು ಪಾಲ್ಗೊಂಡಿದ್ದವು.

ಇದೀಗ ಮತ್ತೊಮ್ಮೆ ಚಾಂಪಿಯನ್ಸ್‌ ಲೀಗ್‌ ಆರಂಭಿಸಲು ಚರ್ಚೆ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾದ ಕ್ರಿಕೆಟ್‌ ವಿಕ್ಟೋರಿಯಾದ ಸಿಇಒ ನಿಕ್‌ ಕಮಿನ್ಸ್‌ ಹೇಳಿದ್ದಾರೆ. ಈ ಹಿಂದೆ ಟೂರ್ನಿ ನಡೆದಾಗ ಆ ಮಾದರಿಯು ಆಗಿನ ಕಾಲಕ್ಕೆ ಸೂಕ್ತ ಎನಿಸಿರಲಿಲ್ಲ.ಟಿ20 ಕ್ರಿಕೆಟ್‌ ಈಗ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ್ದು, ಈಗ ಮತ್ತೊಮ್ಮೆ ವಿವಿಧ ದೇಶಗಳ ಫ್ರಾಂಚೈಸಿ ತಂಡಗಳ ನಡುವೆ ಟೂರ್ನಿ ಆಯೋಜಿಸಲು ವಿಶ್ವದ ಮೂರು ಬಲಿಷ್ಠ ಕ್ರಿಕೆಟ್‌ ಮಂಡಳಿಗಳು ಗಂಭೀರ ಚರ್ಚೆ ನಡೆಸುತ್ತಿವೆ ಎಂದು ಕಮಿನ್ಸ್‌ ಹೇಳಿದ್ದಾರೆ.

ಮುಂದಿನ ವರ್ಷ ಡಬ್ಲ್ಯುಪಿಎಲ್‌, ಮಹಿಳೆಯರ ದಿ ಹಂಡ್ರೆಡ್‌, ಮಹಿಳಾ ಬಿಗ್‌ಬ್ಯಾಶ್‌ ತಂಡಗಳನ್ನು ಒಳಗೊಂಡು ಮಹಿಳಾ ಚಾಂಪಿಯನ್ಸ್‌ ಲೀಗ್‌ ಆರಂಭಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.