ಬಿಸಿಸಿಐನಿಂದ ಲೆಜೆಂಡ್ಸ್‌ ಟಿ20 ಲೀಗ್‌?

| Published : Aug 14 2024, 12:46 AM IST

ಸಾರಾಂಶ

ನಿವೃತ್ತ ಕ್ರಿಕೆಟಿಗರ ಲೀಗ್‌ಗೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ ಬೇಡಿಕೆ. ಲೀಗ್‌ಗಳಲ್ಲಿ ಭಾರತೀಯರೂ ಸಕ್ರಿಯ. ಐಪಿಎಲ್‌ ರೀತಿ ಟೂರ್ನಿ ಆರಂಭಿಸುವಂತೆ ಬಿಸಿಸಿಐಗೆ ಹಲವು ಮಾಜಿ ಕ್ರಿಕೆಟಿಗರಿಂದ ಮನವಿ?

ನವದೆಹಲಿ: ಇತ್ತೀಚೆಗೆ ಕ್ರಿಕೆಟಿಗರು ನಿವೃತ್ತಿ ಪಡೆದರೂ, ಕ್ರಿಕೆಟ್‌ನಿಂದ ಸಂಪೂರ್ಣವಾಗಿ ದೂರವಾಗಿರುವುದಿಲ್ಲ. ವಿಶ್ವದೆಲ್ಲೆಡೆ ಈಗ ನಿವೃತ್ತ ಕ್ರಿಕೆಟಿಗರ ಲೀಗ್‌ಗಳು ಜನಪ್ರಿಯತೆ ಗಳಿಸಿದ್ದು, ಅನೇಕ ಖಾಸಗಿ ಟೂರ್ನಿಗಳು ನಡೆಯುತ್ತಿವೆ. ಇದೇ ರೀತಿಯ ಟೂರ್ನಿಯೊಂದನ್ನು ಶೀಘ್ರದಲ್ಲೇ ಬಿಸಿಸಿಐ ಸಹ ಆರಂಭಿಸಬಹುದು ಎನ್ನುವ ಚರ್ಚೆ ಭಾರತೀಯ ಕ್ರಿಕೆಟ್‌ ವಲಯದಲ್ಲಿ ನಡೆಯುತ್ತಿದೆ.

ಇದಕ್ಕೆ ಕಾರಣ, ಐಪಿಎಲ್‌ ಮಾದರಿಯಲ್ಲೇ ವಿವಿಧ ನಗರಗಳ ಹೆಸರುಗಳೊಂದಿಗೆ ಫ್ರಾಂಚೈಸಿ ತಂಡಗಳನ್ನು ಒಳಗೊಂಡ ಟಿ20 ಲೀಗ್‌ ಆರಂಭಿಸುವಂತೆ ಹಲವು ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಮನವಿಯನ್ನು ಬಿಸಿಸಿಐ ಪರಿಗಣಿಸಿದ್ದು, ಟೂರ್ನಿ ಆರಂಭಿಸುವ ಬಗ್ಗೆ ಚಿಂತನೆ ನಡೆಸಬಹುದು ಎಂದು ತಿಳಿದುಬಂದಿದೆ. ಈ ಬೆಳವಣಿಗೆ ಸಂಬಂಧ ಬಿಸಿಸಿಐ ಅಧಿಕಾರಿಯೊಬ್ಬರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ‘ಸದ್ಯ 2025ರ ಐಪಿಎಲ್‌ನ ಮೆಗಾ ಹರಾಜು ಪ್ರಕ್ರಿಯೆಯತ್ತ ಬಿಸಿಸಿಐ ಅಧ್ಯಕ್ಷ, ಕಾರ್ಯದರ್ಶಿ ಗಮನ ಹರಿಸಿದ್ದಾರೆ. ಮುಂದಿನ ವರ್ಷ ಲೆಜೆಂಡ್ಸ್‌ ಕ್ರಿಕೆಟ್‌ ಲೀಗ್ ಆಯೋಜನೆಗೆ ನಿರ್ಧರಿಸಬಹುದು. ಸದ್ಯದ ಮಟ್ಟಿಗೆ ಹೊಸ ಟೂರ್ನಿಗೆ ಸಂಬಂಧಿಸಿದ ವಿಚಾರಗಳು ಕೇವಲ ಮಾತುಕತೆ ಹಂತದಲ್ಲಿವೆ ಅಷ್ಟೇ’ ಎಂದಿದ್ದಾರೆ.

ಭಾರಿ ಜನಪ್ರಿಯತೆ ಗಳಿಸಿದ್ದ ಆಲ್‌-ಸ್ಟಾರ್ಸ್‌ ಟೂರ್ನಿ

ವಿಶ್ವದೆಲ್ಲೆಡೆ ಈಗ ನಿವೃತ್ತ ಕ್ರಿಕೆಟಿಗರನ್ನು ಒಟ್ಟುಗೂಡಿಸಿ ಟೂರ್ನಿಗಳನ್ನು ನಡೆಸಲಾಗುತ್ತಿದೆ. 2015ರಲ್ಲೇ ಸಚಿನ್‌ ತೆಂಡುಲ್ಕರ್‌ ಹಾಗೂ ಶೇನ್‌ ವಾರ್ನ್‌ ಆಲ್‌-ಸ್ಟಾರ್ಸ್‌ ಲೀಗ್‌ ಎನ್ನುವ ಟೂರ್ನಿಯನ್ನು ಅಮೆರಿಕದಲ್ಲಿ ನಡೆಸಿದ್ದರು. ಆ ಟೂರ್ನಿಯು ಕ್ರಿಕೆಟ್‌ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿತ್ತು. ಆದರೆ ಹಣಕಾಸು ಹಾಗೂ ಪ್ರಾಯೋಜಕತ್ವದ ಸಮಸ್ಯೆಯಿಂದಾಗಿ ಟೂರ್ನಿಯು 2ನೇ ಆವೃತ್ತಿಯನ್ನು ಕಾಣಲಿಲ್ಲ. ಸಚಿನ್‌, ಯುವಿ ಸಹ ಲೆಜೆಂಡ್ಸ್‌ ಲೀಗ್‌ಗಳಲ್ಲಿ ಆಡುತ್ತಿದ್ದಾರೆ!

ಇತ್ತೀಚೆಗೆ ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಶಿಪ್‌, ಗ್ಲೋಬಲ್‌ ಲೆಜೆಂಡ್ಸ್‌ ಲೀಗ್‌, ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಹೀಗೆ ಹಲವು ಖಾಸಗಿ ಟೂರ್ನಿಗಳು ಆಯೋಜನೆಗೊಳ್ಳುತ್ತಿವೆ. ಭಾರತದ ದಿಗ್ಗಜ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌, ವೀರೇಂದ್ರ ಸೆಹ್ವಾಗ್‌ ಸೇರಿ ಅನೇರು ವಿದೇಶಿ ತಾರೆಯರು ಸಹ ಈ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಕಳೆದ ತಿಂಗಳಷ್ಟೇ ಯುವರಾಜ್‌ ನೇತೃತ್ವದ ಭಾರತ ತಂಡ ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಟ್ರೋಫಿ ಗೆದ್ದಿತ್ತು.

ಸದ್ಯ ಈ ಎಲ್ಲಾ ಲೀಗ್‌ಗಳನ್ನು ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳು, ಕೆಲ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗಳ ಬೆಂಬಲದೊಂದಿಗೆ ಆಯೋಜಿಸುತ್ತಿವೆ. ಆದರೆ ಲೀಗ್‌ ಆಯೋಜಿಸುವ ಸಂಪೂರ್ಣ ಖರ್ಚು ವೆಚ್ಚ ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳದ್ದೇ ಆಗಿರುತ್ತದೆ. ಲೆಜೆಂಡ್ಸ್‌ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಬೆಂಬಲದೊಂದಿಗೆ ನಡೆದಿತ್ತು. ಒಂದು ವೇಳೆ ಬಿಸಿಸಿಐ ತಾನೇ ಲೆಜೆಂಡ್ಸ್‌ ಲೀಗ್ ಆರಂಭಿಸಿದರೆ, ನಿವೃತ್ತ ಕ್ರಿಕೆಟಿಗರ ಟೂರ್ನಿ ಆರಂಭಿಸಿದ ಮೊದಲ ಕ್ರಿಕೆಟ್‌ ಬೋರ್ಡ್‌ ಎನ್ನುವ ಹಿರಿಮೆಗೆ ಪಾತ್ರವಾಗಲಿದೆ.