ಸಾರಾಂಶ
ಬೆಂಗಳೂರು ಬುಲ್ಸ್‌ಗೆ ಮತ್ತೊಮ್ಮೆ ಒಲಿಯದ ಗೆಲುವು. 16ನೇ ಪಂದ್ಯ ಟೈನಲ್ಲಿ ಮುಕ್ತಾಯ. ಲೀಗ್‌ನಲ್ಲಿ ಇನ್ನು ಕೇವಲ 6 ಪಂದ್ಯ ಬಾಕಿ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬೆಂಗಳೂರು ತಂಡ.
ಪುಣೆ: ಪ್ರೊ ಕಬಡ್ಡಿ 11ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್‌ಗೆ ಗೆಲುವು ಮರೀಚಿಕೆಯಾಗಿದೆ. ಸತತ 8 ಸೇರಿ ಒಟ್ಟು 13 ಸೋಲುಗಳನ್ನು ಕಂಡಿರುವ ಬುಲ್ಸ್, ಮಂಗಳವಾರ ತನ್ನ 16ನೇ ಪಂದ್ಯವನ್ನು ಟೈ ಮಾಡಿಕೊಳ್ಳಲು ಯಶಸ್ವಿಯಾಯಿತು. ಗುಜರಾತ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 34-34 ಅಂಕಗಳಲ್ಲಿ ಸಮಬಲ ಸಾಧಿಸಿ ಸೋಲಿನಿಂದ ಪಾರಾಯಿತು.
ಪಂದ್ಯದ ಕೊನೆಯ ರೈಡ್‌ಗೂ ಮುನ್ನ ಗುಜರಾತ್ 34-33ರಿಂದ ಮುಂದಿತ್ತು. ಕೊನೆಯ ರೈಡ್, ಡು ಆರ್ ಡೈ ರೈಡ್ ಆಗಿದ್ದ ಗುಜರಾತ್ ಅಂಕ ಗಳಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಈ ಆವೃತ್ತಿಯಲ್ಲಿ ಈಗಾಗಲೇ 2 ಪಂದ್ಯವನ್ನು 1 ಅಂಕ ಅಂತರದಿಂದ ಸೋತಿರುವ ಬುಲ್ಸ್, ಮತ್ತೊಂದು ಸೋಲಿನ ಭೀತಿಯಲ್ಲಿದ್ದಾಗ ಜೈಂಟ್ಸ್‌ನ ಹಿಮಾನ್ಶು ಸಿಂಗ್‌ರನ್ನು ಬುಲ್ಸ್‌ನ ಲಕ್ಕಿ ಕುಮಾರ್ ಟ್ಯಾಕಲ್ ಮಾಡಿ, ಪಂದ್ಯ ಟೈ ಆಗುವಂತೆ ಮಾಡಿದರು. ಬುಲ್ಸ್ 16 ಪಂದ್ಯಗಳ ಬಳಿಕ 2 ಜಯ, 13 ಸೋಲು, 1 ಟೈನೊಂದಿಗೆ 19 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಬಾಕಿಯಾಗಿದೆ.ಮಂಗಳವಾರ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ಯು ಮುಂಬಾ 43-29ರಲ್ಲಿ ಜಯಿಸಿತು.