ಪ್ರೊ ಕಬಡ್ಡಿ: ಬೆಂಗಳೂರಿಗೆ 7ನೇ ಸೋಲಿನ ಶಾಕ್‌!

| Published : Jan 06 2024, 02:00 AM IST

ಸಾರಾಂಶ

ಮಾಜಿ ಚಾಂಪಿಯನ್‌ ಪ್ರೊ ಕಬಡ್ಡಿನ ಈ ಬಾರಿ ಪ್ರೊ ಕಬಡ್ಡಿಯಲ್ಲಿ ಮಂಕಾಗಿದೆ. ಶುಕ್ರವಾರ ಮುಂಬೈ ವಿರುದ್ಧವೂ ಸೋಲುವ ಮೂಲಕ ತಂಡ 11 ಪಂದ್ಯಗಳಲ್ಲಿ 7ನೇ ಸೋಲು ದಾಖಲಿಸಿತು. ಸದ್ಯ ತಂಡ ಅಂಕಪಟ್ಟಿಯಲ್ಲಿ ಕೆಳಗಿದೆ. ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಇನ್ನುಳಿದ ಪಂದ್ಯಗಳಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಬೇಕು.

ಯು ಮುಂಬಾ ವಿರುದ್ಧ 35-40 ಅಂಕಗಳಲ್ಲಿ ಸೋಲು । ಪ್ಲೇ-ಆಫ್‌ ಹಾದಿ ಕಠಿಣ

ಮುಂಬೈ: ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ನ ಸೋಲಿನ ಸರಪಳಿ ಸದ್ಯದಲ್ಲಿ ಕಳಚುವ ಲಕ್ಷಣಗಳು ಕಂಡುಬರುತ್ತಿಲ್ಲ. ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿದ್ದ ಬುಲ್ಸ್‌ಗೆ ಶುಕ್ರವಾರ ಯು ಮುಂಬಾ ವಿರುದ್ಧ 35-40 ಅಂಕಗಳ ಸೋಲು ಎದುರಾಯಿತು. ಇದು 11 ಪಂದ್ಯಗಳಲ್ಲಿ ತಂಡದ 7ನೇ ಸೋಲು. ಗೆದ್ದಿದ್ದು ಕೇವಲ 4ರಲ್ಲಿ. ಅತ್ತ ಮುಂಬಾ ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ ಜಯಭೇರಿ ಬಾರಿಸಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.ಆರಂಭದಲ್ಲೇ ಹಿನ್ನಡೆಗೊಳಗಾಗಿದ್ದ ಬುಲ್ಸ್‌ಗೆ ಯಾವ ಕ್ಷಣದಲ್ಲೂ ಪುಟಿದೇಳಲು ಮುಂಬಾ ಅವಕಾಶ ನೀಡಿಲಿಲ್ಲ. ಕೊನೆ ನಿಮಿಷಗಳಲ್ಲಿ ತೀವ್ರ ಪೈಪೋಟಿ ನೀಡಿ ಅಂಕ ಗಳಿಕೆಗೆ ವೇಗ ನೀಡಿತಾದರೂ, ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧಕ್ಕೆ 10-19ರಿಂದ ಹಿನ್ನಡೆಯಲ್ಲಿದ್ದ ಬುಲ್ಸ್‌, ದ್ವಿತೀಯಾರ್ಧದಲ್ಲಿ 25 ಅಂಕ ದೋಚಿತು. ಆದರೆ ಆರಂಭದಲ್ಲಿ ಎದುರಾದ ತೀವ್ರ ಹಿನ್ನಡೆ ತಂಡವನ್ನು ಸೋಲಿಸಿತು.ಬುಲ್ಸ್‌ನ ಸುಶಿಲ್‌, ಸಚಿನ್ ತಲಾ 6 ರೈಡ್‌ ಅಂಕ ಗಳಿಸಿದರು. ವಿಕಾಸ್‌, ಭರತ್‌, ನೀರಜ್‌ ಒಟ್ಟಾಗಿ 28 ರೈಡ್‌ಗಳಲ್ಲಿ ಪಡೆದಿದ್ದು 9 ಅಂಕ. ಮುಂಬಾದ ಗುಮಾನ್‌ 7 ರೈಡ್‌ ಅಂಕ ಸಂಪಾದಿಸಿದರು.

ಡೆಲ್ಲಿಗೆ ರೋಚಕ ಜಯ

ಶುಕ್ರವಾರದ ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್‌ ವಿರುದ್ಧ ದಬಾಂಗ್‌ ಡೆಲ್ಲಿ 38-37 ಅಂಕಗಳ ರೋಚಕ ಗೆಲುವು ಸಾಧಿಸಿತು. ಡೆಲ್ಲಿ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದರೆ, ಪಾಟ್ನಾಗೆ 10ರಲ್ಲಿ 5ನೇ ಸೋಲು.ಇಂದಿನ ಪಂದ್ಯಗಳು: ಯು ಮುಂಬಾ-ಜೈಪುರ, ರಾತ್ರಿ 8ಕ್ಕೆ, ಟೈಟಾನ್ಸ್‌-ಗುಜರಾತ್‌, ರಾತ್ರಿ 9ಕ್ಕೆ