ಸಾರಾಂಶ
ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ 43-32ರ ಭರ್ಜರಿ ಜಯ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ
ನವದಹಲಿ: ಪ್ರೊ ಕಬಡ್ಡಿ 12ನೇ ಆವೃತ್ತಿಯು ರೋಚಕ ಘಟ್ಟ ತಲುಪಿರುವ ಸಮಯದಲ್ಲಿ ಬೆಂಗಳೂರು ಬುಲ್ಸ್ ಹ್ಯಾಟ್ರಿಕ್ ಗೆಲುವಿನೊಂದಿಗೆ ನೇರವಾಗಿ ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಭಾನುವಾರ ನಡೆದ ಬೆಂಗಾಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಬುಲ್ಸ್ 43-32 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.
ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಬುಲ್ಸ್, ಮೊದಲಾರ್ಧದ ಮುಕ್ತಾಯಕ್ಕೆ 22-15 ಅಂಕಗಳಿಂದ ಮುಂದಿತ್ತು. ದ್ವಿತೀಯಾರ್ಧದಲ್ಲೂ ಪ್ರಾಬಲ್ಯ ಮುಂದುವರಿಸಿದ ಬೆಂಗಳೂರು ತಂಡ, 30ನೇ ನಿಮಿಷದಲ್ಲಿ ಬೆಂಗಾಲನ್ನು ಆಲೌಟ್ ಮಾಡಿ 35-26ರ ಮುನ್ನಡೆ ಪಡೆದು ಗೆಲುವಿನತ್ತ ಮುನ್ನುಗ್ಗಿತು. ಪಂದ್ಯದ ಯಾವ ಹಂತದಲ್ಲೂ ವಾರಿಯರ್ಸ್, ಬುಲ್ಸ್‌ಗೆ ಅಪಾಯಕಾರಿಯಾಗಿ ಕಂಡುಬರಲಿಲ್ಲ.ಪಂದ್ಯದಲ್ಲಿ 22 ರೈಡ್‌ಗಳನ್ನು ನಡೆಸಿದ ಬುಲ್ಸ್‌ನ ಅಲಿರೇಜಾ ಮಿರ್ಜಾಯಿನ್ 16 ರೈಡ್ ಅಂಕ ಪಡೆದರು. 2 ಟ್ಯಾಕಲ್ ಅಂಕ ಸೇರಿ ಒಟ್ಟು 18 ಅಂಕದೊಂದಿಗೆ ಪಂದ್ಯದ ಹೀರೋ ಆಗಿ ಹೊರಹೊಮ್ಮಿದರು. ಬುಲ್ಸ್‌ನ ಡಿಫೆಂಡರ್‌ಗಳೂ ಉತ್ತಮ ಪ್ರದರ್ಶನ ತೋರಿ ಗೆಲುವಿಗೆ ಕೊಡುಗೆ ನೀಡಿದರು.
ಮತ್ತೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಪುಣೇರಿ ಪಲ್ಟನ್ ಟೈ ಬ್ರೇಕರ್‌ನಲ್ಲಿ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿತು.