10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಸ್ಪರ್ಧೆ. ಅರ್ಹತಾ ಸುತ್ತಿನಲ್ಲಿ 3ನೇ ಸ್ಥಾನ ಪಡೆದ ಜೋಡಿ. ಮಂಗಳವಾರ ದ.ಕೊರಿಯಾ ವಿರುದ್ಧ ಕಂಚಿನ ಪದಕ ಪಂದ್ಯ

ಪ್ಯಾರಿಸ್‌: ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿರುವ ಮನು ಭಾಕರ್‌, ಶೂಟಿಂಗ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಣಕ್ಕಿಳಿದಿರುವ ಭಾಕರ್‌, ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದಾರೆ. 

ಮಂಗಳವಾರ ದಕ್ಷಿಣ ಕೊರಿಯಾ ಜೋಡಿ ವಿರುದ್ಧ ಪಂದ್ಯ ನಡೆಯಲಿದೆ.ಸೋಮವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು-ಸರಬ್ಜೋತ್‌, 580 ಅಂಕಗಳೊಂದಿಗೆ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಟರ್ಕಿ ಜೋಡಿ 582, ಸರ್ಬಿಯಾ ಜೋಡಿ 581 ಅಂಕ ಗಳಿಸಿ ಅಗ್ರ-2 ಸ್ಥಾನ ಪಡೆದ ಕಾರಣ ಪದಕ ಖಚಿತಪಡಿಸಿಕೊಂಡಿದ್ದು, ಚಿನ್ನದ ಪದಕಕ್ಕಾಗಿ ಪರಸ್ಪರ ಸೆಣಸಾಡಲಿವೆ. ಭಾರತ 580ರ ಬದಲು 583 ಅಂಕ ಗಳಿಸಿದ್ದರೆ ಪದಕ ಖಚಿತವಾಗುತಿತ್ತು. ಇದೇ ವೇಳೆ ದಕ್ಷಿಣ ಕೊರಿಯಾ 579 ಅಂಕ ಗಳಿಸಿ ಕಂಚಿನ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಆರ್ಚರಿ: ಭಾರತ ಪುರುಷರ ತಂಡಕ್ಕೆ ಕ್ವಾರ್ಟರ್‌ನಲ್ಲಿ ಶಾಕ್‌

ಆರ್ಚರಿ ಸ್ಪರ್ಧೆಯಲ್ಲಿ ಭಾರತ ಪುರುಷರ ರೀಕರ್ವ್‌ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದೆ. ತರುಣ್‌ದೀಪ್‌ ರೇ, ಧೀರಜ್‌ ಹಾಗೂ ಪ್ರವೀಣ್ ಜಾಧವ್‌ ಅವರನ್ನೊಳಗೊಂಡ ತಂಡ ಕ್ವಾರ್ಟರ್‌ನಲ್ಲಿ ಟರ್ಕಿ ತಂಡದ ವಿರುದ್ಧ 2-6 ಅಂತರದಲ್ಲಿ ಸೋತು ಹೊರಬಿತ್ತು. 2 ಸೆಟ್‌ಗಳಲ್ಲಿ ಸೋತ ಬಳಿಕ 3ನೇ ಸೆಟ್‌ನಲ್ಲಿ ಭಾರತ ಗೆಲುವು ಸಾಧಿಸಿದರೂ, 4ನೇ ಸೆಟ್‌ನಲ್ಲಿ ಮತ್ತೆ ಟರ್ಕಿ ಪ್ರಾಬಲ್ಯ ಸಾಧಿಸಿ ಸೆಮೀಸ್‌ಗೇರಿತು. ಮಹಿಳಾ ಆರ್ಚರಿ ತಂಡ ಭಾನುವಾರ ಕ್ವಾರ್ಟರ್‌ನಲ್ಲಿ ಸೋಲನುಭವಿಸಿತ್ತು.