ಭಾರತ ಕಮಾಲ್‌: ಪರ್ತ್‌ನಲ್ಲಿ ನೆಲಕಚ್ಚಿದ ಆಸೀಸ್‌! 1ನೇ ಟೆಸ್ಟ್‌: ಬೂಮ್ರಾ ಸಾರಥ್ಯದ ಭಾರತಕ್ಕೆ 295 ರನ್‌ ಭರ್ಜರಿ ಗೆಲುವು

| Published : Nov 26 2024, 05:25 AM IST

jasprit bhumra
ಭಾರತ ಕಮಾಲ್‌: ಪರ್ತ್‌ನಲ್ಲಿ ನೆಲಕಚ್ಚಿದ ಆಸೀಸ್‌! 1ನೇ ಟೆಸ್ಟ್‌: ಬೂಮ್ರಾ ಸಾರಥ್ಯದ ಭಾರತಕ್ಕೆ 295 ರನ್‌ ಭರ್ಜರಿ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂಜಿಲೆಂಡ್‌ ವಿರುದ್ಧ ತವರಿನ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಆಸ್ಟ್ರೇಲಿಯಾ ವಿಮಾನವೇರಿದ್ದ ಟೀಂ ಇಂಡಿಯಾ, ಆಸೀಸ್‌ ನೆಲದಲ್ಲಿ ಕಮಾಲ್‌ ಮಾಡಿದೆ. ವೈಟ್‌ವಾಶ್‌ ಅವಮಾನ ಮರೆಸುವ ರೀತಿಯಲ್ಲಿ ಆಸ್ಟ್ರೇಲಿಯಾಕ್ಕೆ ಅವರದೇ ತವರಿನಲ್ಲಿ ಮಣ್ಣುಮುಕ್ಕಿಸಿದೆ.

ಪರ್ತ್‌: ನ್ಯೂಜಿಲೆಂಡ್‌ ವಿರುದ್ಧ ತವರಿನ ಸರಣಿಯಲ್ಲಿ ವೈಟ್‌ವಾಶ್‌ ಮುಖಭಂಗಕ್ಕೊಳಗಾದ ಬೆನ್ನಲ್ಲೇ ಆಸ್ಟ್ರೇಲಿಯಾ ವಿಮಾನವೇರಿದ್ದ ಟೀಂ ಇಂಡಿಯಾ, ಆಸೀಸ್‌ ನೆಲದಲ್ಲಿ ಕಮಾಲ್‌ ಮಾಡಿದೆ. ವೈಟ್‌ವಾಶ್‌ ಅವಮಾನ ಮರೆಸುವ ರೀತಿಯಲ್ಲಿ ಆಸ್ಟ್ರೇಲಿಯಾಕ್ಕೆ ಅವರದೇ ತವರಿನಲ್ಲಿ ಮಣ್ಣುಮುಕ್ಕಿಸಿದೆ.

ಮೊದಲ ಇನ್ನಿಂಗ್ಸ್‌ನ ಕುಸಿತದ ಬಳಿಕ ಫೀನಿಕ್ಸ್‌ನಂತೆ ಎದ್ದುಬಂದ ಟೀಂ ಇಂಡಿಯಾ, ತನ್ನ ಸಾಮರ್ಥ್ಯ ಪ್ರದರ್ಶಿಸುವ ರೀತಿ ಮೊದಲ ಟೆಸ್ಟ್‌ ಪಂದ್ಯದಲ್ಲಿ 295 ರನ್‌ಗಳ ಬೃಹತ್‌ ಗೆಲುವು ದಾಖಲಿಸಿದೆ. ಈ ಮೂಲಕ ಜಸ್‌ಪ್ರೀತ್‌ ಬೂಮ್ರಾ ನಾಯಕತ್ವದ ಭಾರತ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಜೊತೆಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಕನಸನ್ನೂ ಜೀವಂತವಾಗಿರಿಸಿಕೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಆಸೀಸ್‌ ತಂಡ, ಭಾರತದ ಬೃಹತ್‌ ಗುರಿ ನೋಡಿಯೇ ಕಂಗಾಲಾಗಿತ್ತು. ಆರಂಭಿಕ ಬ್ಯಾಟರ್‌ಗಳ ಹೀನಾಯ ಪ್ರದರ್ಶನದಿಂದಾಗಿ ತಂಡ ಗೆಲ್ಲುವ ಎಲ್ಲಾ ಸಾಧ್ಯತೆಗಳನ್ನು ಭಾನುವಾರವೇ ಇಲ್ಲವಾಗಿಸಿತ್ತು. ವಿಚಿತ್ರವಾಗಿ ವರ್ತಿಸುತ್ತಿದ್ದ ಪಿಚ್‌ನಲ್ಲಿ ಭಾರತದ ಪ್ರಚಂಡ ವೇಗಿಗಳ ದಾಳಿ ಎದುರಿಸಲು ಪರದಾಡಿದ ಆಸ್ಟ್ರೇಲಿಯಾ, 2ನೇ ಇನ್ನಿಂಗ್ಸ್‌ನಲ್ಲಿ ಸೋಮವಾರ 238 ರನ್‌ಗೆ ಸರ್ವಪತನ ಕಂಡಿತು.

ಹೆಡ್ ಹೋರಾಟ: 3ನೇ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟದಲ್ಲಿ 12 ರನ್‌ ಕಲೆಹಾಕಿದ್ದ ಆಸೀಸ್‌ ಪಂದ್ಯ ಉಳಿಸಿಕೊಳ್ಳಲು ಅಸಾಧಾರಣ ಪ್ರದರ್ಶನ ತೋರಬೇಕಿತ್ತು. ಆದರೆ ಟ್ರ್ಯಾವಿಸ್‌ ಹೆಡ್‌ ಹೊರತುಪಡಿಸಿ ಇತರ ಬ್ಯಾಟರ್‌ಗಳಿಗೆ ಭಾರತೀಯ ಬೌಲರ್‌ಗಳನ್ನು ಎದುರಿಸಿ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ದಿನದ ಆರಂಭದಲ್ಲೇ ಉಸ್ಮಾನ್‌ ಖವಾಜ(04) ಹಾಗೂ ಸ್ಟೀವ್‌ ಸ್ಮಿತ್‌(17) ವಿಕೆಟ್‌ ಕಬಳಿಸಿದ ಸಿರಾಜ್‌ ಭಾರತದ ಪಾಳಯದಲ್ಲಿ ಸಂಭ್ರಮ ಹೆಚ್ಚಿಸಿದರು. ಈ ನಡುವೆ ವೇಗವಾಗಿಯೇ ರನ್‌ ಕಲೆಹಾಕುತ್ತಿದ್ದ ಹೆಡ್‌, 101 ಎಸೆತಗಳಲ್ಲಿ 89 ರನ್‌ ಸಿಡಿಸಿದರು. ಆದರೆ ಹೆಡ್‌ಗೆ ಬೂಮ್ರಾ ಪೆವಿಲಿಯನ್‌ ಹಾದಿ ತೋರುವುದರೊಂದಿಗೆ ಆಸೀಸ್‌ ಹೋರಾಟ ಕೈಬಿಟ್ಟಿತು. ಮಿಚೆಲ್‌ ಮಾರ್ಷ್‌ 47, ಅಲೆಕ್ಸ್‌ ಕೇರಿ 36 ರನ್‌ ಬಾರಿಸಿ ಸೋಲಿನ ಅಂತರವನ್ನು 300ಕ್ಕಿಂತ ಕೆಳಗಿಳಿಸಲು ನೆರವಾದರು. ಬೂಮ್ರಾ ಹಾಗೂ ಸಿರಾಜ್‌ ತಲಾ 3 ವಿಕೆಟ್‌ ಕಬಳಿಸಿದರು.

ಇದಕ್ಕೂ ಮುನ್ನ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯಕ್ಕೆ ತುತ್ತಾಗಿ 150 ರನ್‌ಗೆ ಆಲೌಟಾಗಿದ್ದರೆ, ಭಾರತದ ವೇಗಿಗಳ ಮುಂದೆ ತತ್ತರಿಸಿದ ಆಸೀಸ್‌ ಕೇವಲ 104ಕ್ಕೆ ಗಂಟುಮೂಟೆ ಕಟ್ಟಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್‌, ಕೊಹ್ಲಿ ಮನಮೋಹಕ ಶತಕ, ಕೆ.ಎಲ್‌.ರಾಹುಲ್‌ ಆಕರ್ಷಕ ಆಟದ ನೆರವಿನಿಂದ 6 ವಿಕೆಟ್‌ಗೆ 487 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿತ್ತು.

ಸ್ಕೋರ್‌: ಭಾರತ ಮೊದಲ ಇನ್ನಿಂಗ್ಸ್‌ 150/10 ಮತ್ತು ಎರಡನೇ ಇನ್ನಿಂಗ್ಸ್‌ 487/6 ಡಿಕ್ಲೇರ್‌, ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 104/10 ಮತ್ತು 2ನೇ ಇನ್ನಿಂಗ್ಸ್‌ 238/10 (ಹೆಡ್‌ 89, ಮಾರ್ಷ್‌ 47, ಕೇರಿ 36, ಬೂಮ್ರಾ 3-42, ಸಿರಾಜ್‌ 3-51, ವಾಷಿಂಗ್ಟನ್‌ 2-48)

ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬೂಮ್ರಾ

295 ರನ್‌ ಅಂತರದಲ್ಲಿ

ಗೆಲುವು: ಹೊಸ ದಾಖಲೆ

ಭಾರತ 295 ರನ್‌ ಅಂತರದಲ್ಲಿ ಜಯಗಳಿಸಿತು. ಇದು ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ರನ್‌ ಅಂತರದಲ್ಲಿ ಸಿಕ್ಕ ಅತಿ ದೊಡ್ಡ ಗೆಲುವು. 1977ರಲ್ಲಿ ಮೆಲ್ಬರ್ನ್‌ ಟೆಸ್ಟ್‌ನಲ್ಲಿ ಭಾರತ 222 ರನ್‌ಗಳಿಂದ ಗೆದ್ದಿದ್ದು ಈ ವರೆಗಿನ ದಾಖಲೆ. ಒಟ್ಟಾರೆ ಆಸೀಸ್‌ ವಿರುದ್ಧ ಭಾರತದ 2ನೇ ಅತಿ ದೊಡ್ಡ ಗೆಲುವು ದಾಖಲಿಸಿತು. 2008ರಲ್ಲಿ ಮೊಹಾಲಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 320 ರನ್‌ಗಳಿಂದ ಜಯಭೇರಿ ಬಾರಿಸಿತ್ತು.

ತವರಿನಾಚೆ ಭಾರತಕ್ಕೆ

3ನೇ ಅತಿದೊಡ್ಡ ಜಯ

ಭಾರತ ತಂಡ ಟೆಸ್ಟ್‌ನಲ್ಲಿ ತವರಿನಾಚೆ 3ನೇ ಅತಿ ದೊಡ್ಡ ಗೆಲುವು ದಾಖಲಿಸಿತು. 2019ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಆ್ಯಂಟಿಗಾದಲ್ಲಿ 318 ರನ್‌, 2017ರಲ್ಲಿ ಶ್ರೀಲಂಕಾ ವಿರುದ್ಧ ಗಾಲೆ ಕ್ರೀಡಾಂಗಣದಲ್ಲಿ 304 ರನ್‌ ಗೆಲುವು ಸಾಧಿಸಿತ್ತು.

ಭಾರತ ವಿರುದ್ಧ ಗರಿಷ್ಠ ರನ್‌:

ಸ್ಮಿತ್‌ ಆಸ್ಟ್ರೇಲಿಯಾದ ನಂ.2

ಭಾರತ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಆಸ್ಟ್ರೇಲಿಯಾ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಟೀವ್‌ ಸ್ಮಿತ್‌ 2ನೇ ಸ್ಥಾನಕ್ಕೇರಿದರು. ಭಾರತ ವಿರುದ್ಧ 20ನೇ ಪಂದ್ಯವಾಡಿದ ಸ್ಮಿತ್‌, ರನ್‌ ಗಳಿಕೆಯನ್ನು 2059ಕ್ಕೆ ಹೆಚ್ಚಿಸಿ, ಮೈಕಲ್‌ ಕ್ಲಾರ್ಕ್‌ರನ್ನು(22 ಪಂದ್ಯಗಳಲ್ಲಿ 2049) ಹಿಂದಿಕ್ಕಿದರು. 29 ಪಂದ್ಯಗಳಲ್ಲಿ 2555 ರನ್‌ ಗಳಿಸಿರುವ ರಿಕಿ ಪಾಂಟಿಂಗ್‌ ಅಗ್ರಸ್ಥಾನದಲ್ಲಿದ್ದಾರೆ.

02ನೇ ಬಾರಿ

ಭಾರತ ವಿರುದ್ಧ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 20 ರನ್‌ಗೂ ಮುನ್ನವೇ 4 ವಿಕೆಟ್‌ ಕಳೆದುಕೊಂಡಿದ್ದು ಇದು 2ನೇ ಬಾರಿ. 1969ರ ಚೆನ್ನೈ ಟೆಸ್ಟ್‌ನಲ್ಲೂ ಈ ರೀತಿಯಾಗಿತ್ತು.

02ನೇ ಗೆಲುವು

ಆಸೀಸ್‌ ಪ್ರವಾಸದಲ್ಲಿ ಭಾರತ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದ್ದು ಇದು 2ನೇ ಬಾರಿ. 2018ರ ಪ್ರವಾಸದಲ್ಲೂ ಭಾರತ ಸರಣಿಯ ಮೊದಲ ಪಂದ್ಯ ಗೆದ್ದಿತ್ತು.

ಕುಂಬ್ಳೆ ಮತ್ತು ಬೂಮ್ರಾ: ಪರ್ತ್‌

ಟೆಸ್ಟ್‌ ಗೆದ್ದ ಏಷ್ಯಾದ ನಾಯಕರು

ಏಷ್ಯಾದ ಇಬ್ಬರ ನಾಯಕರು ಮಾತ್ರ ಪರ್ತ್‌ನಲ್ಲಿ ಟೆಸ್ಟ್‌ ಗೆಲುವು ಸಾಧಿಸಿದ್ದಾರೆ. ಅನಿಲ್‌ ಕುಂಬ್ಳೆ ನಾಯಕತ್ವದಲ್ಲಿ ಭಾರತ 2008ರ ಟೆಸ್ಟ್‌ನಲ್ಲಿ ಗೆದ್ದಿದ್ದರೆ, ಈ ಬಾರಿ ಬೂಮ್ರಾ ನಾಯಕತ್ವದಲ್ಲಿ ಜಯಭೇರಿ ಬಾರಿಸಿದೆ. ಭಾರತ ಹೊರತುಪಡಿಸಿ ಬೇರೆ ಯಾವುದೇ ಏಷ್ಯನ್‌ ತಂಡ ಪರ್ತ್‌ನಲ್ಲಿ ಟೆಸ್ಟ್‌ ಗೆದ್ದಿಲ್ಲ.

150ಕ್ಕೆ ಆಲೌಟಾದ್ರೂ ಟೆಸ್ಟ್‌ನಲ್ಲೇ

2ನೇ ಗರಿಷ್ಠ ರನ್‌ ಅಂತರದ ಜಯ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 150ಕ್ಕೆ ಆಲೌಟಾದರೂ, 295 ರನ್‌ ಗೆಲುವು ಸಾಧಿಸಿತು. ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 150 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿ ತಂಡವೊಂದು ಗಳಿಸಿದ 2ನೇ ಗರಿಷ್ಠ ರನ್‌ ಅಂತರದ ಗೆಲುವು ಇದು. 1991ರ ಬ್ರಿಡ್ಜ್‌ಟೌನ್‌ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ ತಂಡ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 149ಕ್ಕೆ ಆಲೌಟಾದರೂ, 343 ರನ್ ಅಂತರದಲ್ಲಿ ಗೆಲುವು ಸಾಧಿಸಿತ್ತು.

ನಾಯಕನಾಗಿ ಜಸ್‌ಪ್ರೀತ್‌

ಬೂಮ್ರಾಗೆ ಮೊದಲ ಜಯ

ವೇಗಿ ಬೂಮ್ರಾ ಟೆಸ್ಟ್‌ನಲ್ಲಿ ನಾಯಕನಾಗಿ ಮೊದಲ ಗೆಲುವು ದಾಖಲಿಸಿದರು. 2022ರ ಇಂಗ್ಲೆಂಡ್‌ ಪ್ರವಾಸದ ವೇಳೆ ರೋಹಿತ್‌ ಶರ್ಮಾ ಕೋವಿಡ್‌ಗೆ ತುತ್ತಾಗಿದ್ದಾಗ ಬೂಮ್ರಾ ಭಾರತದ ನಾಯಕತ್ವ ವಹಿಸಿದ್ದರು. ಈ ಮೂಲಕ 1987ರ ಬಳಿಕ ಭಾರತದ ನಾಯಕತ್ವ ವಹಿಸಿದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದರು. ಆದರೆ ಆ ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು. ಉಳಿದಂತೆ ಬೂಮ್ರಾ ಟಿ20ಯಲ್ಲಿ ಭಾರತವನ್ನು 2 ಬಾರಿ ಮುನ್ನಡೆಸಿದ್ದಾರೆ. ಐರ್ಲೆಂಡ್‌ ವಿರುದ್ಧ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದಿತ್ತು.