ಸರ್‌ ಡಾನ್‌ ಬ್ರಾಡ್ಮನ್‌ರ ‘ಬ್ಯಾಗಿ ಗ್ರೀನ್‌’ ₹2.63 ಕೋಟಿಗೆ ಹರಾಜು!

| Published : Dec 04 2024, 12:32 AM IST

ಸರ್‌ ಡಾನ್‌ ಬ್ರಾಡ್ಮನ್‌ರ ‘ಬ್ಯಾಗಿ ಗ್ರೀನ್‌’ ₹2.63 ಕೋಟಿಗೆ ಹರಾಜು!
Share this Article
  • FB
  • TW
  • Linkdin
  • Email

ಸಾರಾಂಶ

1947-48ರಲ್ಲಿ ಭಾರತ ವಿರುದ್ಧ ಸರಣಿಯಲ್ಲಿ ಡಾನ್‌ ಬ್ರಾಡ್ಮನ್‌ ಧರಿಸಿದ್ದ ಕ್ಯಾಪ್‌ಗೆ ಭಾರಿ ಬೇಡಿಕೆ. 2020ರಲ್ಲೂ ಬ್ರಾಡ್ಮನ್‌ರ ಕ್ಯಾಪ್‌ಗೆ ಸಿಕ್ಕಿತ್ತು ಬೃಹತ್‌ ಮೊತ್ತ.

ಸಿಡ್ನಿ: ಕ್ರಿಕೆಟ್‌ ದಂತಕಥೆ ಸರ್‌ ಡಾನ್‌ ಬ್ರಾಡ್ಮನ್‌ನ ‘ಬ್ಯಾಗಿ ಗ್ರೀನ್‌’ (ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಅಧಿಕೃತ ಕ್ಯಾಪ್‌) ಮಂಗಳವಾರ ಬರೋಬ್ಬರಿ 4,79,700 ಆಸ್ಟ್ರೇಲಿಯನ್‌ ಡಾಲರ್ಸ್‌ (ಅಂದಾಜು 2.63 ಕೋಟಿ ರು.)ಗೆ ಹರಾಜಾಗಿದೆ. ಇಲ್ಲಿನ ಬೊನ್‌ಹ್ಯಾಮ್ಸ್‌ ಸಂಸ್ಥೆಯು ಹರಾಜು ಪ್ರಕ್ರಿಯೆಯನ್ನು ನಡೆಸಿದೆ. ಕ್ಯಾಪ್‌ ಅನ್ನು ಖರೀದಿಸಿದವರು ವಿವರ ಬಹಿರಂಗಗೊಂಡಿಲ್ಲ.

1947-48ರಲ್ಲಿ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಆಡಿದ್ದ ಟೆಸ್ಟ್‌ ಸರಣಿ ವೇಳೆ ಬ್ರಾಡ್ಮನ್‌ ಈ ಕ್ಯಾಪ್‌ ಧರಿಸಿದ್ದರು. ಅವರು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಕೊನೆಯ ಟೆಸ್ಟ್‌ ಸರಣಿ ಅದಾಗಿತ್ತು. ಆ ಸರಣಿಯಲ್ಲಿ 6 ಇನ್ನಿಂಗ್ಸಲ್ಲಿ ಬ್ರಾಡ್ಮನ್‌ 3 ಶತಕ, 1 ದ್ವಿಶತಕದೊಂದಿಗೆ 715 ರನ್‌ ಕಲೆಹಾಕಿದ್ದರು. ಆಸ್ಟ್ರೇಲಿಯಾ 4-0ಯಲ್ಲಿ ಸರಣಿ ಗೆದ್ದಿತ್ತು. ಭಾರತ ಸ್ವತಂತ್ರ ರಾಷ್ಟ್ರವಾಗಿ ಪಾಲ್ಗೊಂಡ ಮೊದಲ ಸರಣಿ ಇದು ಎನ್ನುವುದು ಮತ್ತೊಂದು ವಿಶೇಷ.

80 ವರ್ಷದ ಹಿಂದೆ ಬ್ರ್ಯಾಡ್ಮನ್‌ ಧರಿಸಿದ್ದ ಕ್ಯಾಪ್‌ನ ಬಣ್ಣ ಮಾಸಿತ್ತು. ಕೆಲವು ಕಡೆ ಹರಿದಿತ್ತು. 1947-48ರ ಸರಣಿ ಬಳಿಕ ಬ್ರಾಡ್ಮನ್‌ ತಮ್ಮ ಕ್ಯಾಪ್‌ ಅನ್ನು ಅಂದಿನ ಭಾರತ ತಂಡದ ವ್ಯವಸ್ಥಾಪಕರಾಗಿದ್ದ ಪಂಕಜ್‌ ಗುಪ್ತಾಗೆ ನೀಡಿದ್ದರು. ಗುಪ್ತಾ ಅದನ್ನು ಭಾರತದ ಮಾಜಿ ವಿಕೆಟ್‌ ಕೀಪರ್‌ ಪಿ.ಕೆ.ಸೇನ್‌ಗೆ ನೀಡಿದ್ದರು.

2003ರಲ್ಲಿ ಹಿಂದಿನ ಮಾಲಿಕರಿಂದ ಬೊನ್‌ಹ್ಯಾಮ್ಸ್‌ ಸಂಸ್ಥೆಯು ಕ್ಯಾಪ್‌ ಅನ್ನು ಖರೀದಿಸಿತ್ತು. ಕ್ಯಾಪ್‌ ಅನ್ನು 2010ರಿಂದ ಈ ತನಕ ಬ್ರಾಡ್ಮನ್‌ನ ಹುಟ್ಟೂರು ಬೌರಾಲ್‌ನಲ್ಲಿರುವ ಬ್ರಾಡ್ಮನ್‌ ಮ್ಯೂಸಿಯಂಗೆ ಬಾಡಿಗೆಗೆ ಕೊಡಲಾಗಿತ್ತು.

ಬ್ರಾಡ್ಮನ್‌ರ ಕ್ಯಾಪ್‌ ಇಷ್ಟು ದೊಡ್ಡ ಮೊತ್ತಕ್ಕೆ ಬಿಕರಿಯಾಗುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಬ್ರಾಡ್ಮನ್‌ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದಾಗ ಧರಿಸಿದ್ದ ಕ್ಯಾಪ್‌ 3.4 ಲಕ್ಷ ಆಸ್ಟ್ರೇಲಿಯನ್‌ ಡಾಲರ್‌ಗೆ ಹರಾಜಾಗಿತ್ತು.