ಟೆಸ್ಟ್‌ ರ್‍ಯಾಂಕಿಂಗ್: ಬೂಮ್ರಾ ನಂ.1 ಸ್ಥಾನ ಭದ್ರ, ತೀವ್ರ ಕುಸಿತ ಕಂಡ ಕೊಹ್ಲಿ, ರೋಹಿತ್‌

| Published : Jan 09 2025, 12:47 AM IST / Updated: Jan 09 2025, 05:08 AM IST

ಸಾರಾಂಶ

9ನೇ ಸ್ಥಾನಕ್ಕೆ ಏರಿದ ರಿಷಭ್‌ ಪಂತ್‌. ಜಡೇಜಾ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ತೀವ್ರ ಕುಸಿತ ಕಂಡ ತಾರಾ ಕ್ರಿಕೆಟಿಗರಾದ ಕೊಹ್ಲಿ, ರೋಹಿತ್‌

ದುಬೈ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಐಸಿಸಿ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಬೂಮ್ರಾ, ಸಾರ್ವಕಾಲಿಕ ಶ್ರೇಷ್ಠ 908 ರೇಟಿಂಗ್‌ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ರವೀಂದ್ರ ಜಡೇಜಾ ಅಗ್ರ-10ರಲ್ಲಿ ಮತ್ತೋರ್ವ ಭಾರತೀಯ. ಅವರು ಒಂದು ಸ್ಥಾನ ಪ್ರಗತಿ ಸಾಧಿಸಿ ಜಂಟಿ 9ನೇ ಸ್ಥಾನದಲ್ಲಿದ್ದಾರೆ. ಜಡೇಜಾ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.ಬ್ಯಾಟರ್‌ಗಳ ಪಟ್ಟಿಯಲ್ಲಿ ರಿಷಭ್‌ ಪಂತ್‌ 3 ಸ್ಥಾನ ಪ್ರಗತಿ ಸಾಧಿಸಿ 9ನೇ ಸ್ಥಾನಕ್ಕೇರಿದ್ದಾರೆ. ಯಶಸ್ವಿ ಜೈಸ್ವಾಲ್‌ 4ನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಶುಭ್‌ಮನ್‌ ಗಿಲ್‌ 23, ವಿರಾಟ್‌ ಕೊಹ್ಲಿ 27, ರೋಹಿತ್ ಶರ್ಮಾ 42ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಎರಡೂವರೆ ದಿನಗಳಲ್ಲೇ ಕೊನೆಯಾದ ಸಿಡ್ನಿ ಟೆಸ್ಟ್‌ ಪಿಚ್‌ಗೆ ‘ತೃಪ್ತಿಕರ’ ರೇಟಿಂಗ್‌

ಸಿಡ್ನಿ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 5ನೇ ಟೆಸ್ಟ್‌ಗೆ ಆತಿಥ್ಯ ವಹಿಸಿದ್ದ ಸಿಡ್ನಿ ಕ್ರೀಡಾಂಗಣದ ಪಿಚ್‌ ತೃಪ್ತಿಕರವಾಗಿತ್ತು ಎಂದು ಐಸಿಸಿ ತಿಳಿಸಿದೆ. ಇತ್ತಂಡಗಳ ನಡುವಿನ ಟೆಸ್ಟ್‌ ಸರಣಿಗೆ ಆತಿಥ್ಯ ವಹಿಸಿದ್ದ ಕ್ರೀಡಾಂಗಣಗಳಿಗೆ ಐಸಿಸಿ ಬುಧವಾರ ರೇಟಿಂಗ್‌ ನೀಡಿದೆ.

 ಪರ್ತ್‌, ಅಡಿಲೇಡ್‌, ಬ್ರಿಸ್ಬೇನ್‌ ಹಾಗೂ ಮೆಲ್ಬರ್ನ್‌ ಕ್ರೀಡಾಂಗಣಗಳ ಪಿಚ್‌ ಉತ್ತಮವಾಗಿತ್ತು ಎಂದಿರುವ ಐಸಿಸಿ, ಸಿಡ್ನಿ ಕ್ರೀಡಾಂಗಣಕ್ಕೆ ‘ತೃಪ್ತಿಕರ’ ಎಂದು ರೇಟಿಂಗ್‌ ನೀಡಿದೆ. ಆದರೆ ಇಲ್ಲಿ ನಡೆದಿದ್ದ ಪಂದ್ಯ ಕೇವಲ ಎರಡೂವರೆ ದಿನಗಳಲ್ಲೇ ಕೊನೆಗೊಂಡಿತ್ತು. ಇದಕ್ಕೆ ಸುನಿಲ್‌ ಗವಾಸ್ಕರ್‌ ಸೇರಿದಂತೆ ಕೆಲ ಕ್ರೀಡಾ ತಜ್ಞರು ಬೇಸರ ವ್ಯಕ್ತಪಡಿಸಿ, ಪಿಚ್‌ ಪಂದ್ಯಕ್ಕೆ ಸೂಕ್ತವಾಗಿರಲಿಲ್ಲ ಎಂದಿದ್ದರು.