ಸಾರಾಂಶ
ಮೆಲ್ಬರ್ನ್: ಈ ಬಾರಿ ಪ್ರವಾಸದಲ್ಲಿ ಆಸ್ಟ್ರೇಲಿಯಾವನ್ನು ವೇಗಿ ಜಸ್‌ಪ್ರೀತ್ ಬೂಮ್ರಾರಷ್ಟು ಕಾಡಿದ ಆಟಗಾರ ಮತ್ತೊಬ್ಬರಿಲ್ಲ. ಬೂಮ್ರಾರ ಬೆಂಕಿ ಚೆಂಡನ್ನು ಎದುರಿಸಿ ನಿಲ್ಲುವುದೇ ಆಸೀಸ್ ಆಟಗಾರರಿಗಿದ್ದ ಪ್ರಮುಖ ಸವಾಲು. ಆದರೆ ಆಸ್ಟ್ರೇಲಿಯಾದ ಅಷ್ಟೂ ಆಟಗಾರರು ಬೆರಗಾಗುವಂತೆ ಬೂಮ್ರಾ ಬೌಲಿಂಗ್ ದಾಳಿಯನ್ನು ಸಲೀಸಾಗಿ ಎದುರಿಸಿದ್ದು 19ರ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್.
ತಮ್ಮ ಚೊಚ್ಚಲ ಪಂದ್ಯದಲ್ಲೇ ಬೂಮ್ರಾ ದಾಳಿಯನ್ನು ಕಾನ್ಸ್ಟಾಸ್ ಪುಡಿಗಟ್ಟಿದ್ದು, ಬಾಕ್ಸಿಂಗ್ ಡೇ ಟೆಸ್ಟ್‌ನ ಮೊದಲ ದಿನವೇ ಭಾರತಕ್ಕೆ ದೊಡ್ಡ ಪಂಚ್ ನೀಡಲು ಯಶಸ್ವಿಯಾಗಿದ್ದಾರೆ.4ನೇ ಟೆಸ್ಟ್‌ನ ಆರಂಭಿಕ ಎರಡು ಅವಧಿಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ, ದಿನದಂತ್ಯಕ್ಕೆ 6 ವಿಕೆಟ್‌ಗೆ 311 ರನ್ ಕಲೆಹಾಕಿದೆ.
ಪಂದ್ಯದ ಮೇಲೆ ಭಾರತ ತನ್ನ ಹಿಡಿತ ಕೈ ಜಾರದಂತೆ ನೋಡಿಕೊಂಡಿದ್ದು ದಿನದ ಕೊನೆ ಅವಧಿಯಲ್ಲಿ. 62 ರನ್ ಅಂತರದಲ್ಲಿ 4 ಪ್ರಮುಖರನ್ನು ಔಟ್ ಮಾಡಿದ ಭಾರತ, ಕೊಂಚ ನಿಟ್ಟುಸಿರು ಬಿಟ್ಟಿದೆ.
ಟಾರ್ಗೆಟ್ ಬೂಮ್ರಾ: ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಕಾನ್ಸ್ಟಾಸ್, ಪಂದ್ಯಕ್ಕೂ ಮುನ್ನ ತಾವಾಡಿದ್ದ ಮಾತಿನಂತೆ ವೇಗಿ ಬೂಮ್ರಾರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿದರು. 3ನೇ ಓವರ್‌ನಲ್ಲಿ ಬೂಮ್ರಾ ಎಸೆತದಲ್ಲಿ ಸ್ಕೂಪ್ ಮಾಡಲು ಪ್ರಯತ್ನಿಸಿದ ಕಾನ್ಸ್ಟಾಸ್, ಅದರಲ್ಲಿ ವಿಫಲರಾದರು. ಆದರೆ ಯುವ ಬ್ಯಾಟರ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.
ಬೂಮ್ರಾರ ಆರಂಭಿಕ ಸ್ಪೆಲ್‌ನಲ್ಲೇ ಆಕ್ರಮಣಕಾರಿ ಆಟವಾಡಿದ ಕಾನ್ಸ್ಟಾಸ್, ಭಾರತಕ್ಕೆ ಆಘಾತ ನೀಡಿದರು. ಅವರು ಮೊದಲ ವಿಕೆಟ್‌ಗೆ ಉಸ್ಮಾನ್ ಖವಾಜ ಜೊತೆಗೂಡಿ 89 ರನ್ ಸೇರಿಸಿದರು. ಈ ಜೋಡಿಯನ್ನು ಬೇರ್ಪಡಿಸಿದ್ದು ರವೀಂದ್ರ ಜಡೇಜಾ. 65 ಎಸೆತಗಳಲ್ಲಿ 60 ರನ್ ಗಳಿಸಿದ್ದ ಕಾನ್ಸ್ಟಾಸ್, ಜಡೇಜಾ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.
ಲಯ ಕಾಯ್ದುಕೊಂಡ ಖವಾಜ-ಲಬುಶೇನ್ 2ನೇ ವಿಕೆಟ್‌ಗೆ 65 ರನ್ ಸೇರಿಸಿದರು. ಭಾರತೀಯ ಬೌಲರ್‌ಗಳನ್ನು ಕಾಡಿದ ಈ ಜೋಡಿ ತಲಾ ಅರ್ಧಶತಕ ಬಾರಿಸಿತು. ಖವಾಜ 57 ರನ್ ಗಳಿಸಿದ್ದಾಗ ಬೂಮ್ರಾ ಎಸೆತದಲ್ಲಿ ಕೆ.ಎಲ್.ರಾಹುಲ್‌ಗೆ ಕ್ಯಾಚ್ ನೀಡಿ ಔಟಾದರು. ಖವಾಜ ಬಳಿಕ ಭಾರತಕ್ಕೆ ತಲೆನೋವಾಗಿದ್ದು ಸ್ಟೀವ್ ಸ್ಮಿತ್. ತಮ್ಮ ಲಯ ಮುಂದುವರಿಸಿದ ಸ್ಮಿತ್, ಲಬುಶೇನ್ ಜೊತೆಗೂಡಿ 3ನೇ ವಿಕೆಟ್‌ಗೆ 83 ರನ್ ಸೇರಿಸಿದರು. 2ನೇ ಅವಧಿ ಮುಕ್ತಾಯಕ್ಕೆ 2 ವಿಕೆಟ್‌ಗೆ 176 ರನ್ ಗಳಿಸಿದ್ದ ಆಸೀಸ್, ಆ ಬಳಿಕವೂ ಭಾರತದ ಮೇಲೆ ಪ್ರಾಬಲ್ಯ ಸಾಧಿಸಿತು. ಡ್ರಿಂಕ್ಸ್ ಬ್ರೇಕ್ ವೇಳೆ 65 ಓವರಲ್ಲಿ 2 ವಿಕೆಟ್‌ಗೆ 237 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್‌ಗೆ ಬೂಮ್ರಾ ಶಾಕ್ ನೀಡಿದರು.
ಪುಟಿದೆದ್ದ ಭಾರತ: ಇನ್ನೇನು ಆಸೀಸ್ ಸಂಪೂರ್ಣ ಹಿಡಿತ ಸಾಧಿಸಿತು ಎನ್ನುವಷ್ಟರಲ್ಲಿ ಭಾರತ ಪುಟಿದೆದ್ದಿತು. 66ನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್, 72 ರನ್ ಗಳಿಸಿದ್ದ ಲಬುಶೇನ್‌ಗೆ ಪೆವಿಲಿಯನ್ ಹಾದಿ ತೋರಿದರು. ಭಾರತವನ್ನು ಸದಾ ಕಾಲ ಕಾಡುತ್ತಿರುವ ಟ್ರ್ಯಾವಿಸ್ ಹೆಡ್ ಅಪರೂಪವೆಂಬಂತೆ ಸೊನ್ನೆಗೆ ಔಟಾದರು. ಅವರು ಬೂಮ್ರಾರ ಮ್ಯಾಜಿಕ್ ದಾಳಿಗೆ ಕ್ಲೀನ್ ಬೌಲ್ಡ್ ಆದರು.
ಬಳಿಕ ಮಿಚೆಲ್ ಮಾರ್ಷ್‌ರನ್ನೂ ಔಟ್ ಮಾಡಿದ ಬೂಮ್ರಾ ಭಾರತದ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು. 31 ರನ್ ಗಳಿಸಿದ್ದ ಅಲೆಕ್ಸ್ ಕೇರಿ ದಿನದ ಕೊನೆಯಲ್ಲಿ ಅಕಾಶ್‌ದೀಪ್‌ಗೆ ವಿಕೆಟ್ ಒಪ್ಪಿಸಿದರು.ಸದ್ಯ ಸ್ಟೀವ್ ಸ್ಮಿತ್ 68 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದು, ಮತ್ತೊಂದು ಶತಕದತ್ತ ದಾಪುಗಾಲಿಟ್ಟಿದ್ದಾರೆ.
ಬೂಮ್ರಾ 3 ವಿಕೆಟ್ ಪಡೆದರೆ, ಆಕಾಶ್‌ದೀಪ್, ಜಡೇಜಾ, ವಾಷಿಂಗ್ಟನ್ ತಲಾ 1 ವಿಕೆಟ್ ಕಬಳಿಸಿದರು.ಸ್ಕೋರ್: ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 311/6(ಮೊದಲ ದಿನದಂತ್ಯಕ್ಕೆ) (ಲಬುಶೇನ್ 72, ಸ್ಮಿತ್ ಔಟಾಗದೆ 68, ಕಾನ್ಸ್ಟಾಸ್ 60, ಖವಾಜ 57, ಬೂಮ್ರಾ 3-75)
52 ಎಸೆತ: ಕಾನ್ಸ್ಟಾಸ್ 52 ಎಸೆತದಲ್ಲಿ ಫಿಫ್ಟಿ. ಇದು ಆಸೀಸ್ ಪರ ಪಾದಾರ್ಪಣೆಯಲ್ಲೇ 3ನೇ ಅತಿ ವೇಗದ ಅರ್ಧಶತಕ. ಗಿಲ್‌ಕ್ರಿಸ್ಟ್ 46, ಆಸ್ಟನ್ ಏಗರ್ 50 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು.
01 ಬಾರಿ: ಬೂಮ್ರಾ ಟೆಸ್ಟ್‌ನಲ್ಲಿ ಮೊದಲ ಬಾರಿ ಓವರೊಂದಲ್ಲಿ 16ಕ್ಕಿಂತ ಹೆಚ್ಚು ರನ್ ಬಿಟ್ಟುಕೊಟ್ಟರು.