ಆಸೀಸ್‌ ವಿರುದ್ಧ ಅಬ್ಬರಿಸಿದ ಬೂಮ್ರಾ ಮತ್ತೆ ನಂ.1: ಯಶಸ್ವಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.2

| Published : Nov 28 2024, 12:36 AM IST / Updated: Nov 28 2024, 04:49 AM IST

ಆಸೀಸ್‌ ವಿರುದ್ಧ ಅಬ್ಬರಿಸಿದ ಬೂಮ್ರಾ ಮತ್ತೆ ನಂ.1: ಯಶಸ್ವಿ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನಂ.2
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ತಿಂಗಳು ದ.ಆಫ್ರಿಕಾದ ರಬಾಡಗೆ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದ ಬೂಮ್ರಾ, ಆಸೀಸ್‌ ಸರಣಿಗೂ ಮುನ್ನ 3ನೇ ಸ್ಥಾನದಲ್ಲಿದ್ದರು.

ದುಬೈ: ಭಾರತದ ತಾರಾ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಐಸಿಸಿ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ ಪಡೆದಿದ್ದ ಬೂಮ್ರಾ, ಮಂಗಳವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ನಲ್ಲಿ 883 ರೇಟಿಂಗ್‌ ಅಂಕಗಳನ್ನು ಪಡೆದಿದ್ದಾರೆ. 

ಕಳೆದ ತಿಂಗಳು ದ.ಆಫ್ರಿಕಾದ ರಬಾಡಗೆ ಅಗ್ರಸ್ಥಾನ ಬಿಟ್ಟುಕೊಟ್ಟಿದ್ದ ಬೂಮ್ರಾ, ಆಸೀಸ್‌ ಸರಣಿಗೂ ಮುನ್ನ 3ನೇ ಸ್ಥಾನದಲ್ಲಿದ್ದರು. ಸದ್ಯ ರಬಾಡ 2, ಆಸ್ಟ್ರೇಲಿಯಾದ ಜೋಶ್‌ ಹೇಜಲ್‌ವುಡ್‌ 3ನೇ ಸ್ಥಾನದಲ್ಲಿದ್ದಾರೆ.ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಯಶಸ್ವಿ ಜೈಸ್ವಾಲ್‌ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ರೂಟ್‌ ಅಗ್ರಸ್ಥಾನದಲ್ಲಿದ್ದು, ವಿರಾಟ್‌ ಕೊಹ್ಲಿ 13ನೇ ಸ್ಥಾನಕ್ಕೇರಿದ್ದಾರೆ. ರಿಷಭ್‌ ಪಂತ್‌ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಜಡೇಜಾ ಹಾಗೂ ಅಶ್ವಿನ್‌ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲೇ ಮುಂದುವರಿದಿದ್ದಾರೆ.ಕರ್ನಾಟಕಕ್ಕೆ 2ನೇ ಸೋಲು!

ಇಂದೋರ್‌: ಈ ಬಾರಿ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಕರ್ನಾಟಕ 2ನೇ ಸೋಲು ಕಂಡಿದೆ. ಬುಧವಾರ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ರಾಜ್ಯ ತಂಡ 5 ವಿಕೆಟ್‌ಗಳಿಂದ ಪರಾಭವಗೊಂಡಿತು. ಆಡಿರುವ 3 ಪಂದ್ಯಗಳಲ್ಲಿ 4 ಅಂಕಗಳಿಸಿರುವ ತಂಡ ‘ಬಿ’ ಗುಂಪಿನಲ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದು, ನಾಕೌಟ್‌ ಹಾದಿ ಕಠಿಣಗೊಳಿಸಿದೆ. ಮೊದಲ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ವಿರೋಚಿತ ಸೋಲು ಕಂಡಿದ್ದ ರಾಜ್ಯ ತಂಡ, 2ನೇ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಜಯ ಸಾಧಿಸಿತ್ತು.ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 20 ಓವರಲ್ಲಿ 8 ವಿಕೆಟ್‌ಗೆ 171 ರನ್‌ ಕಲೆಹಾಕಿತು. 

3.3 ಓವರ್‌ಗಳಲ್ಲಿ 16 ರನ್‌ ಗಳಿಸುವಷ್ಟರಲ್ಲೇ ರಾಜ್ಯ ತಂಡ ಆರಂಭಿಕ ಮೂವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ನಾಯಕ ಮಯಾಂಕ್ ಅಗರ್‌ವಾಲ್‌ 4, ಚೇತನ್‌ ಎಲ್‌.ಆರ್‌. 1 ಹಾಗೂ ಸ್ಮರಣ್‌ 6 ರನ್‌ ಗಳಿಸಿ ಪೆವಿಲಿಯನ್‌ ಮರಳಿದರು. ಆದರೆ ಶ್ರೇಯಸ್‌ ಗೋಪಾಲ್‌ 36, ಕೆ.ಎಲ್‌.ಶ್ರೀಜಿತ್‌ 31 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. 15 ಓವರಲ್ಲಿ 118 ರನ್‌ ಗಳಿಸಿದ್ದ ತಂಡ, ಕೊನೆ 5 ಓವರಲ್ಲಿ 53 ರನ್‌ ದೋಚಿತು. ಕೊನೆಯಲ್ಲಿ ಅಬ್ಬರಿಸಿದ ಶುಭಾಂಗ್‌ ಹೆಗಡೆ(22 ಎಸೆತಗಳಲ್ಲಿ 43), ಮನೋಜ್ ಭಾಂಡಗೆ(15 ಎಸೆತಕ್ಕೆ 24) ರಾಜ್ಯ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಆದರೆ ಸೌರಾಷ್ಟ್ರ ಈ ಮೊತ್ತವನ್ನು 18.1 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ರಾಜ್ಯ ತಂಡದ ಬೌಲರ್‌ಗಳು ಮತ್ತೆ ಕೈಕೊಟ್ಟರು. ಆರಂಭಿಕ ಆಟಗಾರ ಹಾರ್ವಿಕ್‌ ದೇಸಾಯಿ(43 ಎಸೆತಗಳಲ್ಲಿ 60) ತಂಡದ ಗೆಲುವಿನ ರೂವಾರಿಯಾದರು.ಸ್ಕೋರ್: ಕರ್ನಾಟಕ 20 ಓವರಲ್ಲಿ 171/8 (ಶುಭಾಂಗ್‌ 43, ಶ್ರೇಯಸ್‌ 36, ಶ್ರೀಜಿತ್‌ 31, ಜಯದೇವ್‌ ಉನಾದ್ಕತ್‌ 2-17), ಸೌರಾಷ್ಟ್ರ 18.1 ಓವರಲ್ಲಿ 173/5 (ಹಾರ್ವಿಕ್‌ 60, ವಿದ್ಯಾಧರ್‌ 2-39)

ನಾಳೆ ಸಿಕ್ಕಿಂ ಸವಾಲು

ನಾಕೌಟ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಾಜ್ಯ ತಂಡ ಗುಂಪು ಹಂತದ 4ನೇ ಪಂದ್ಯದಲ್ಲಿ ಶುಕ್ರವಾರ ಸಿಕ್ಕಿಂ ವಿರುದ್ಧ ಸೆಣಸಾಡಲಿದೆ. ಸಿಕ್ಕಿಂ ತಂಡ ಟೂರ್ನಿಯಲ್ಲಿ ಆಡಿರುವ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿದ್ದು, ಸತತ 4ನೇ ಸೋಲು ತಪ್ಪಿಸುವ ಒತ್ತಡದಲ್ಲಿದೆ.