ಸಾರಾಂಶ
ಟೊರೊಂಟೊ(ಕೆನಡಾ): ಭಾರತದ ತಾರಾ ಚೆಸ್ ಪಟುಗಳಾದ ವಿದಿತ್ ಗುಜರಾತಿ ಹಾಗೂ ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ. ಆದರೆ ಆರ್.ಪ್ರಜ್ಞಾನಂದ, ಆರ್.ವೈಶಾಲಿ ಸೋಲನುಭವಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ನಡೆದ ಮುಕ್ತ ವಿಭಾಗದ 2ನೇ ಸುತ್ತಿನಲ್ಲಿ 18ರ ಪ್ರಜ್ಞಾನಂದ ವಿರುದ್ಧ ಗುಕೇಶ್ ಜಯಭೇರಿ ಬಾರಿಸಿದರು. ವಿದಿತ್ ಅವರು ವಿಶ್ವ ನಂ.3, ಅಮೆರಿಕದ ಹಿಕರು ನಕಮುರಾ ಅವರನ್ನು ಸೋಲಿಸಿದರು.
ಇದೇ ವೇಳೆ ಮಹಿಳಾ ವಿಭಾಗದಲ್ಲಿ ಪ್ರಜ್ಞಾನಂದರ ಸಹೋದರಿ, ಆರ್.ವೈಶಾಲಿ ಅವರು ಚೀನಾದ ಟಾನ್ ಝೊಂಗ್ಯಿ ವಿರುದ್ಧ ಸೋಲುಂಡರು. ಕೊನೆರು ಹಂಪಿ ರಷ್ಯಾದ ಕ್ಯಾಟೆರಿನಾ ಲಾಗ್ನೊ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡರು.
3ನೇ ಸುತ್ತಿನಲ್ಲಿ ವಿದಿತ್‌ಗೆ ಪ್ರಜ್ಞಾನಂದ ಸವಾಲು ಎದುರಾಗಲಿದ್ದು, ಗುಕೇಶ್ ಅವರು ರಷ್ಯಾದ ಇಯಾನ್ ನೆಪೋಮ್ನಿಯಾಚ್ಚಿ ವಿರುದ್ಧ ಸೆಣಸಲಿದ್ದಾರೆ. ಮಹಿಳಾ ವಿಭಾಗದಲ್ಲಿ ವೈಶಾಲಿಗೆ ಬಲ್ಗೇರಿಯಾದ ಸಲಿಮೋವಾ, ಕೊನೆರು ಹಂಪಿಗೆ ಚೀನಾದ ಟಾನ್ ಝೊಂಗ್ಯಿ ಸವಾಲು ಎದುರಾಗಲಿದೆ.
ಕಜಕಸ್ತಾನ ಬ್ಯಾಡ್ಮಿಂಟನ್: ಅನುಪಮಾ, ತರುಣ್‌ಗೆ ಪ್ರಶಸ್ತಿ
ಅಸ್ತಾನ(ಕಜಕಸ್ತಾನ): ಕಜಕಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಯುವ ಶಟ್ಲರ್‌ಗಳಾದ ಅನುಪಮಾ ಉಪಾಧ್ಯಾಯ ಹಾಗೂ ತರುಣ್ ಮನ್ನೇಪಲ್ಲಿ ಕ್ರಮವಾಗಿ ಪುರುಷ, ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 22ರ ತರುಣ್ ಅವರು ಮಲೇಷ್ಯಾದ ಸೂಂಗ್ ಜೂ ವೆನ್ ವಿರುದ್ಧ 21-10, 21-19ರಲ್ಲಿ ಜಯಗಳಿಸಿದರು, 19ರ ಹರೆಯದ ಅನುಪಮಾ ಅವರು ಪ್ರಶಸ್ತಿ ಸುತ್ತಿನಲ್ಲಿ ಭಾರತದವರೇ ಆದ ಇಶಾರಾಣಿ ವಿರುದ್ಧ 21-15, 21-16ರಲ್ಲಿ ಗೆದ್ದು ಚಾಂಪಿಯನ್ ಎನಿಸಿಕೊಂಡರು. ಇದೇ ವೇಳೆ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಸಂಜಯ್ ಧನರಾಜ್-ಮನೀಶಾ ಜೋಡಿ ಸೋಲನುಭವಿಸಿತು.