ಸಾರಾಂಶ
ಕ್ರೈಸ್ಟ್‌ಚರ್ಚ್: 80ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದರೂ ಬಳಿಕ ಅಲೆಕ್ಸ್ ಕೇರ್ರಿ, ಮಿಚೆಲ್ ಮಾರ್ಷ್ ಹಾಗೂ ಪ್ಯಾಟ್ ಕಮಿನ್ಸ್ ಪ್ರದರ್ಶಿಸಿದ ಹೋರಾಟದಿಂದಾಗಿ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 3 ವಿಕೆಟ್ ರೋಚಕ ಗೆಲುವು ಸಾಧಿಸಿದೆ.
ಇದರೊಂದಿಗೆ ಆಸೀಸ್ 2 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿತು. ಗೆಲುವಿಗೆ 279 ರನ್ ಗುರಿ ಪಡೆದಿದ್ದ ಆಸೀಸ್ ಆರಂಭಿಕರನ್ನು ಕಡಿಮೆ ಮೊತ್ತಕ್ಕೆ ಕಳೆದುಕೊಂಡಿತ್ತು.
ಆದರೆ 6ನೇ ವಿಕೆಟ್‌ಗೆ ಮಾರ್ಷ್-ಕೇರ್ರಿ 140 ರನ್ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ಮಾರ್ಷ್ 80ಕ್ಕೆ ಔಟಾದ ಬಳಿಕ ಮುರಿದ 8ನೇ ವಿಕೆಟ್‌ಗೆ ಕಮಿನ್ಸ್(ಔಟಾಗದೆ 32) 61 ರನ್ ಸೇರಿಸಿದ ಕೇರ್ರಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ಕೇರ್ರಿ ಔಟಾಗದೆ 98 ರನ್ ಗಳಿಸಿದರು.
ಟೆಸ್ಟ್ ಚಾಂಪಿಯನ್‌ಶಿಪ್: ನಂ.2 ಸ್ಥಾನಕ್ಕೆ ಆಸೀಸ್
ದುಬೈ: ನ್ಯೂಜಿಲೆಂಡ್ ವಿರುದ್ಧ 2ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಂ.2 ಸ್ಥಾನಕ್ಕೇರಿದೆ.
ಸತತ 2 ಸೋಲು ಕಂಡ ನ್ಯೂಜಿಲೆಂಡ್ 3ನೇ ಸ್ಥಾನಕ್ಕೆ ಕುಸಿದಿದ್ದು, ಕಳೆದೆರಡು ಬಾರಿಯ ರನ್ನರ್-ಅಪ್ ಭಾರತ ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಆಸೀಸ್ ಸದ್ಯ 12 ಪಂದ್ಯಗಳಲ್ಲಿ ಶೇ.62.50 ಗೆಲುವಿನ ಪ್ರತಿಶತ ಹೊಂದಿದ್ದು, ನ್ಯೂಜಿಲೆಂಡ್ 6 ಪಂದ್ಯಗಳಲ್ಲಿ ಶೇ.50 ಜಯದ ಪ್ರತಿಶತದೊಂದಿಗೆ 3ನೇ ಸ್ಥಾನದಲ್ಲಿದೆ.
ಸರಣಿಗೂ ಮುನ್ನ ಟಿಮ್ ಸೌಥಿ ನಾಯಕತ್ವದ ಕಿವೀಸ್ ಅಗ್ರಸ್ಥಾನದಲ್ಲಿತ್ತು. ಆದರೆ ಇಂಗ್ಲೆಂಡ್ ವಿರುದ್ಧ 4-1 ಅಂತರದಲ್ಲಿ ಗೆದ್ದ ಟೀಂ ಇಂಡಿಯಾ ಅಗ್ರಸ್ಥಾನ ಅಲಂಕರಿಸಿದೆ. ಭಾರತ ಸದ್ಯ 9 ಪಂದ್ಯಗಳಲ್ಲಿ ಶೇ.68.51 ಗೆಲುವಿನ ಪ್ರತಿಶತ ಹೊಂದಿದೆ.