ಸಾರಾಂಶ
ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ತಮ್ಮನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಭಾರತದ ಕುಸ್ತಿಪಟು ವಿನೇಶ್ ಪೋಗಟ್ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಮಂಗಳವಾರ ಪ್ರಕಟಿಸಲಿದೆ. ಶುಕ್ರವಾರವೇ ಅರ್ಜಿ ವಿಚಾರಣೆ ಕೊನೆಗೊಳಿಸಿದ್ದ ನ್ಯಾಯಾಲಯ, ಶನಿವಾರ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿತ್ತು.
ಆದರೆ ತೀರ್ಪನ್ನು ಮುಂದೂಡಿರುವ ನ್ಯಾಯಾಲಯ, ಮಂಗಳವಾರ ಸಂಜೆ 6 ಗಂಟೆಯ ಒಳಗಾಗಿ ಪ್ರಕಟಿಸುವುದಾಗಿ ತಿಳಿಸಿದೆ. 50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ದೇಹದ ತೂಕ 100 ಗ್ರಾಂನಷ್ಟು ಹೆಚ್ಚಿತ್ತು ಎನ್ನುವ ಕಾರಣಕ್ಕಾಗಿ ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಮೂಲಕ ಫೈನಲ್‌ನಲ್ಲಿ ಆಡುವ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ವಿನೇಶ್, ತಮಗೆ ಬೆಳ್ಳಿ ಪದಕವಾದರೂ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿನೇಶ್ ಪೋಗಟ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.
‘ಫ್ರೀ ಆಫ್ಘನ್ ವುಮೆನ್’ ಬಟ್ಟೆ ಧರಿಸಿದ ಅಥ್ಲೀಟ್ ಅನರ್ಹ!
ಪ್ಯಾರಿಸ್: ಒಲಿಂಪಿಕ್ಸ್‌ನ ಬ್ರೇಕ್‌ಡ್ಯಾನ್ಸ್ ಸ್ಪರ್ಧೆ ವೇಳೆ ‘ಫ್ರೀ ಆಫ್ಘನ್ ವುಮೆನ್’(ಅಫ್ಘಾನಿಸ್ತಾನದ ಮಹಿಳೆಯರನ್ನು ಮುಕ್ತಗೊಳಿಸಿ) ಎಂದು ಬರೆಯಾಗಿದ್ದ ಬಟ್ಟೆ ಧರಿಸಿದ್ದ ಸ್ಪರ್ಧಿಯನ್ನು ಆಯೋಜಕರು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿದ್ದಾರೆ. ಅಫ್ಘಾನಿಸ್ತಾನ ಮೂಲದ, ಒಲಿಂಪಿಕ್ಸ್‌ನ ನಿರಾಶ್ರಿತ ತಂಡದ ಸ್ಪರ್ಧಿಯಾಗಿದ್ದ ಮನಿಶಾ ತಾಲಶ್ ಅನರ್ಹಗೊಂಡ ಸ್ಪರ್ಧಿ.
ಶನಿವಾರ ಬ್ರೇಕ್‌ಡ್ಯಾನ್ಸ್‌ನ ಪ್ರಿ ಕ್ವಾಲಿಫೈಯರ್ ಸ್ಪರ್ಧೆ ವೇಳೆ 21 ವರ್ಷದ ಮನಿಶಾ, ಫ್ರೀ ಆಫ್ಘನ್ ವುಮೆನ್ ಎಂದು ಬರೆದಿದ್ದ ಬಟ್ಟೆ ಧರಿಸಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ ರಾಜಕೀಯ ಹೇಳಿಕೆ, ಘೋಷಣೆಗಳಿಗೆ ನಿಷೇಧವಿರುವುದರಿಂದ ಮನಿಶಾರನ್ನು ಆಯೋಜಕರು ಅನರ್ಹಗೊಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ 2021ರಲ್ಲಿ ತಾಲಿಬಾನ್ ಆಡಳಿತ ಬಂದ ಬಳಿಕ ಅಲ್ಲಿಂದ ಪಲಾಯನಗೈದಿದ್ದ ಮನಿಶಾ, ಬಳಿಕ ಸ್ಪೇನ್‌ನಲ್ಲಿ ನೆಲೆಸಿದ್ದಾರೆ.