ಪಾಕ್‌ ತಂಡದ ವಿರುದ್ಧ ದೇಶದ್ರೋಹದ ಕೇಸ್‌ ದಾಖಲಿಸಿದ ವಕೀಲ!

| Published : Jun 14 2024, 01:01 AM IST / Updated: Jun 14 2024, 04:24 AM IST

ಸಾರಾಂಶ

ಪಾಕ್‌ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದಿದ್ದಾರೆ.

ಇಸ್ಲಾಮಾಬಾದ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಮಾಜಿ ಚಾಂಪಿಯನ್‌ ಪಾಕಿಸ್ತಾನ ವಿರುದ್ಧ ಪಾಕ್‌ನ ಗುಜ್ರಾನ್ವಾಲಾ ನಗರದ ವಕೀಲರೊಬ್ಬರು ದೇಶದ್ರೋಹ ಕೇಸ್‌ ದಾಖಲಿಸಿದ್ದಾರೆ. 

ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಕೇಸ್‌ನ ಬಗ್ಗೆ ಜೂ.21ಕ್ಕೆ ಮುನ್ನ ವರದಿ ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ. ಪಾಕ್‌ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇದರಿಂದ ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದು ಅರ್ಜಿದಾರ ಉಲ್ಲೇಖಿಸಿದ್ದಾಗಿ ವರದಿಯಾಗಿದೆ.

ಮಯಾಮಿಯಲ್ಲೇ ಬಾಕಿಯಾದ ಲಂಕಾ ತಂಡ!

ಮಯಾಮಿ(ಫ್ಲೋರಿಡಾ): ಫ್ಲೋರಿಡಾದ ಮಯಾಮಿಯಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ನಡುವೆ ಟಿ20 ವಿಶ್ವಕಪ್‌ನ ನೇಪಾಳ ವಿರುದ್ಧ ಪಂದ್ಯವಾಡಲು ಫ್ಲೋರಿಡಾದ ಮಯಾಮಿಗೆ ತೆರಳಿದ್ದ ಶ್ರೀಲಂಕಾ ತಂಡ ವಿಮಾನ ಹಾರಾಟ ವ್ಯತ್ಯಯದಿಂದಾಗಿ ಅಲ್ಲೇ ಬಾಕಿಯಾಗಿದೆ.

 ಲಂಕಾ ತಂಡ ನೆದರ್‌ಲೆಂಡ್ಸ್ ವಿರುದ್ಧದ ತನ್ನ ಮುಂದಿನ ಪಂದ್ಯವನ್ನು ಜೂ.17ರಂದು ಸೇಂಟ್‌ ಲೂಸಿಯಾದಲ್ಲಿ ಆಡಬೇಕಿದೆ. ಆಟಗಾರರು ಗುರುವಾರ ಸೇಂಟ್‌ ಲೂಸಿಯಾಗೆ ಪ್ರಯಾಣಿಸಬೇಕಿತ್ತು. ಆದರೆ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಸೇಂಟ್‌ ಲೂಸಿಯಾಗೆ ಪ್ರಯಾಣಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಆಟಗಾರರು ಶುಕ್ರವಾರ ಫ್ಲೋರಿಡಾದಿಂದ ತೆರಳುವ ನಿರೀಕ್ಷೆಯಿದೆ.