ಚಾಂಪಿಯನ್ಸ್‌ ಟ್ರೋಫಿ: ಭಾರತದ ಪಂದ್ಯ ಕರಾಚಿಯಲ್ಲೇ ನಡೆಸಲು ಐಸಿಸಿಗೆ ಪಿಸಿಬಿ ಸಲಹೆ!

| Published : May 02 2024, 12:18 AM IST / Updated: May 02 2024, 04:35 AM IST

ಸಾರಾಂಶ

ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಆಡಲು ಭಾರತ ತಂಡ ಪಾಕ್‌ಗೆ ತೆರಳಿರಲಿಲ್ಲ.ಚಾಂಪಿಯನ್ಸ್‌ ಟ್ರೋಫಿ ಆಡಲು ಸಹ ಭಾರತ ತಂಡ ಪಾಕ್‌ಗೆ ತೆರಳುವ ಸಾಧ್ಯತೆ ತೀರಾ ಕಡಿಮೆ.

ಕರಾಚಿ: 2025ರಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತದ ಪಂದ್ಯಗಳನ್ನು ಒಂದೇ ಕ್ರೀಡಾಂಗಣದಲ್ಲಿ ನಡೆಸಿ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ)ಯು ಐಸಿಸಿ ಸಲಹೆ ನೀಡಿದೆ. 

ಪಿಸಿಬಿಯು ಈಗಾಗಲೇ ಟೂರ್ನಿಗೆ 3 ಕ್ರೀಡಾಂಗಣಗಳನ್ನು ಅಂತಿಮಗೊಳಿಸಿದ್ದು, ಕರಾಚಿ, ರಾವಲ್ಪಿಂಡಿ ಹಾಗೂ ಲಾಹೋರ್‌ನಲ್ಲಿ ಪಂದ್ಯ ನಡೆಸುವುದಾಗಿ ತಿಳಿಸಿದೆ. ವರದಿಗಳ ಪ್ರಕಾರ, ಭದ್ರತಾ ಕಾರಣಕ್ಕೆ ಭಾರತೀಯ ಆಟಗಾರರ ಪ್ರಯಾಣವನ್ನು ಕಡಿಮೆಗೊಳಿಸಲು ತಂಡದ ಗುಂಪು ಹಂತದ ಪಂದ್ಯಗಳನ್ನು ಕರಾಚಿಯಲ್ಲಿ ಮಾತ್ರ ನಡೆಸಲು ಐಸಿಸಿಗೆ ಮನವಿ ಮಾಡಿದ್ದಾಗಿ ತಿಳಿದುಬಂದಿದೆ.

ಕಳೆದ ವರ್ಷ ಏಷ್ಯಾಕಪ್‌ನಲ್ಲಿ ಆಡಲು ಭಾರತ ತಂಡ ಪಾಕ್‌ಗೆ ತೆರಳಿರಲಿಲ್ಲ. ಹೀಗಾಗಿ ಟೂರ್ನಿ ಹೈಬ್ರಿಡ್‌ ಮಾದರಿಯಲ್ಲಿ ನಡೆದಿತ್ತು. ಇನ್ನು ಚಾಂಪಿಯನ್ಸ್‌ ಟ್ರೋಫಿ ಆಡಲು ಭಾರತ ತಂಡ ಪಾಕ್‌ಗೆ ತೆರಳುವ ಸಾಧ್ಯತೆ ತೀರಾ ಕಡಿಮೆ.

ಮ್ಯಾಡ್ರಿಡ್‌ ಓಪನ್‌: ಮೊದಲ ಸುತ್ತಲ್ಲೇ ಸೋತ ಬೋಪಣ್ಣ

ಮ್ಯಾಡ್ರಿಡ್‌: ಅಗ್ರ ಶ್ರೇಯಾಂಕಿ ಭಾರತೀಯ ಟೆನಿಸಿಗ ರೋಹಣ್‌ ಬೋಪಣ್ಣ ಅವರು ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದ್ದಾರೆ. 

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಮಂಗಳವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಆರಂಭಿಕ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜೋರ್ಡನ್‌ ಥಾಂಪ್ಸನ್‌-ಅಮೆರಿಕದ ಸೆಬಾಸ್ಟಿಯನ್‌ ಕೊರ್ಡಾ ವಿರುದ್ಧ 6-7(4), 5-7 ಸೆಟ್‌ಗಳಲ್ಲಿ ಪರಾಭವಗೊಂಡರು. ಬೋಪಣ್ಣ-ಎಬ್ಡೆನ್‌ ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಆಗಿದ್ದು, ಇತ್ತೀಚೆಗಷ್ಟೇ ಮಿಯಾಮಿ ಓಪನ್‌ನಲ್ಲೂ ಪ್ರಶಸ್ತಿ ಗೆದ್ದಿದ್ದರು.