ರಣಜಿ: ಚಂಡೀಗಢ ವಿರುದ್ಧ ಮೊದಲ ದಿನ ಕರ್ನಾಟಕ ಮೇಲುಗೈ

| Published : Feb 17 2024, 01:16 AM IST

ಸಾರಾಂಶ

ಕರ್ನಾಟಕದ ಬೌಲರ್‌ಗಳು ಮತ್ತೆ ತಮ್ಮ ಅಬ್ಬರದ ಪ್ರದರ್ಶನ ಮುಂದುವರಿಸಿದ್ದಾರೆ. ಮೊದಲ ದಿನವೇ ಚಂಡೀಗಢವನ್ನು ಕಾಡಿದ ಬೌಲರ್‌ಗಳು, ರಾಜ್ಯ ತಂಡ ಮೇಲುಗೈ ಸಾಧಿಸಲು ನೆರವಾದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಣಜಿ ಟ್ರೋಫಿಯ ಚಂಡೀಗಢ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕರ್ನಾಟಕ ಮೊದಲ ದಿನ ಮೇಲುಗೈ ಸಾಧಿಸಿದೆ. ರಾಜ್ಯದ ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದಿಂದಾಗಿ ಚಂಡೀಗಢ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 219 ರನ್‌ ಗಳಿಸಿತು.ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಿದ್ದರೆ ಗೆಲ್ಲಲೇಬೇಕಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ, ಚಂಡೀಗಢವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡ 4 ರನ್ ಗಳಿಸುವಷ್ಟರಲ್ಲೇ ಶಿವಂ ಭಾಂಬ್ರಿ ವಿಕೆಟ್‌ ಕಳೆದುಕೊಂಡರೆ, ಅರ್ಸಲನ್‌ ಖಾನ್‌(08) ಔಟಾದಾಗ ತಂಡದ ಮೊತ್ತ ಕೇವಲ 8 ರನ್‌. ನಾಯಕ ಮನನ್‌ ವೋಹ್ರಾ ಕೂಡಾ 21 ರನ್‌ಗೆ ವಿಕೆಟ್‌ ಒಪ್ಪಿಸಿದರು. 37ಕ್ಕೆ 3 ವಿಕೆಟ್‌ ಕಳೆದುಕೊಂಡ ತಂಡಕ್ಕೆ ಕರಣ್‌ ಕೈಲಾ ಹಾಗೂ ಕುನಾಲ್ ಮಹಾಜನ್‌ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 71 ರನ್‌ ಸೇರಿಸಿತು. ಕುನಾಲ್‌ 34ಕ್ಕೆ ವಿಕೆಟ್‌ ಒಪ್ಪಿಸಿದರೆ, ಕರಣ್‌ 79 ರನ್‌ ಸಿಡಿಸಿ ತಂಡಕ್ಕೆ ಆಪತ್ಬಾಂಧವರಾಗಿ ಮೂಡಿಬಂದರು. ಕೌಶಿಕ್‌ 24 ರನ್‌ ಕೊಡುಗೆ ನೀಡಿದರು.

7ನೇ ವಿಕೆಟ್‌ಗೆ ಜೊತೆಯಾಗಿರುವ ಮಯಾಂಕ್‌ ಸಿಧು(ಔಟಾಗದೆ 31) ಹಾಗೂ ಗುರೀಂದರ್‌ ಸಿಂಗ್‌(ಔಟಾಗದೆ 10) ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ಯುವ ಹೊಣೆ ಹೊತ್ತುಕೊಂಡಿದ್ದಾರೆ.ಕರ್ನಾಟಕ ಪರ ವೈಶಾಕ್‌, ಹಾರ್ದಿಕ್‌ ರಾಜ್‌ ತಲಾ 2 ವಿಕೆಟ್‌, ಕೌಶಿಕ್‌ ಹಾಗೂ ವೆಂಕಟೇಶ್‌ ತಲಾ 1 ವಿಕೆಟ್‌ ಪಡೆದರು.ಸ್ಕೋರ್‌: ಚಂಡೀಗಢ 219/6(ಮೊದಲ ದಿನದಂತ್ಯಕ್ಕೆ) (ಕರಣ್‌ 79, ಕುನಾಲ್‌ 34, ವೈಶಾಕ್‌ 2-48, ಹಾರ್ದಿಕ್‌ 2-54)