ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಸರ್ಕಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದ ಕಾರ್ಮಿಕರಿಗೆ ಯಾವುದೇ ನೋಟೀಸ್ ನೀಡದೆ ಏಕಾಏಕಿ ಗುಡಿಸಲುಗಳನ್ನು ನೆಲಸಮ ಮಾಡಿದ್ದು ಖಂಡನೀಯ ಎಂದಿರುವ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಘಟನೆ ಖಂಡಿಸಿ ಮಾ.11ರಂದು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಸಮೀಪದ ಚೆರಿಯಪರಂಬುವಿನ ಸರ್ಕಾರಿ ಜಾಗದಲ್ಲಿ 2008ರಿಂದಲೂ ಗುಡಿಸಲು ಕಟ್ಟಿಕೊಂಡು ಕಾರ್ಮಿಕರು ವಾಸವಿದ್ದಾರೆ. ದಿಢೀರಾಗಿ ಆರ್‌ಐ, ವಿಐ ಸೇರಿದಂತೆ ಸಿಬ್ಬಂದಿ ಆಗಮಿಸಿ ಯಾರೂ ಇಲ್ಲದ ಸಂದರ್ಭ ಮನೆಗಳನ್ನು ಕೆಡವಿ ಹಾಕಿದ್ದಾರೆ. ಮಕ್ಕಳು, ಅನಾರೋಗ್ಯಪೀಡಿತರ ಬಗ್ಗೆಯೂ ಮಾನವೀಯತೆ ತೋರದೆ ಸರ್ವಾಧಿಕಾರಿ ಧೋರಣೆ ತೋರಿದ್ದಾರೆ. ಅವರಿಗೆ ತಮ್ಮ ತಪ್ಪು ಅರಿವಾದಾಗ ಹೊಸದಾಗಿ ಕಟ್ಟಿರುವ ಗುಡಿಸಲುಗಳನ್ನು ತೆರವುಗೊಳಿಸಿದ್ದಾಗಿ ಹೇಳಿದ್ದಾರೆ. ಆದ್ರೆ ಸುಮಾರು 18 ಕುಟುಂಬಗಳು ಕಳೆದ 15 ವರ್ಷಗಳಿಂದಲೂ ಇಲ್ಲೇ ವಾಸವಿದ್ದಾರೆ ಎಂದರು. ಯಾರದ್ದೋ ಕುಮ್ಮಕ್ಕಿಗೆ ಒಳಗಾಗಿ ಅಧಿಕಾರಿಗಳು ಬಡವರ ಮೇಲೆ ದರ್ಪ ತೋರುತ್ತಿದ್ದಾರೆ. ಘಟನೆ ಖಂಡಿಸಿ ಮಾ. 11ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಜಿಲ್ಲಾಡಳಿತ ಭವನದ ಎದುರೇ ಗುಡಿಸಲು ನಿರ್ಮಿಸುವ ಮೂಲಕ ಸಂಬಂಧಪಟ್ಟವರ ಗಮನ ಸೆಳೆಯಲಾಗುವುದು ಎಂದು ಭರತ್ ತಿಳಿಸಿದರು.ಸ್ಥಳೀಯರಾದ ಎನ್.ಬಿ ದಿಲೀಶ್ ಮಾತನಾಡಿ, ಸ್ಥಳೀಯ ಗ್ರಾ. ಪಂಚಾಯ್ತಿಯಿಂದ ನದಿ ತೀರದ ಪೈಸಾರಿ ಜಾಗದಲ್ಲಿ ಕಸ ವಿಲೇವಾರಿ ಮಾಡಲಾಗ್ತಿದೆ. ಅತ್ತ ಕಸ ತರದಂತೆ ಹಲವು ಬಾರಿ ರಸ್ತೆ ತಡೆ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಆ ತಪ್ಪನ್ನು ಕಾರ್ಮಿಕರ ಮೇರೆ ಹೊರಿಸಿ ಅಲ್ಲಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು. ಗುಡಿಸಲುಗಳನ್ನು ತೆರವುಗೊಳಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಜೊತೆಗೆ ಕಾರ್ಮಿಕರಿಗೆ ನಷ್ಟ ಪರಿಹಾರ ಭರಿಸಬೇಕು ಹಾಗೂ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಕಾರ್ಮಿಕರಾದ ಶಾಂತರಾಜು ಎಸ್, ಶಂಕರ್ ಬಿ.ಹೆಚ್, ಸುನಿತಾ ವೈ.ಆರ್, ವೈ.ಎಸ್ ಪಾರ್ವತಿ ಹಾಜರಿದ್ದರು.