ಸಾರಾಂಶ
ಬಾಗಲೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಸಹಯೋಗದೊಂದಿಗೆ ಸಿಎಂಆರ್ ವಿಶ್ವವಿದ್ಯಾನಿಲಯ ಆಯೋಜಿಸಿದ ಅಂತರ್ ವಿವಿ ಮಟ್ಟದ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಿವಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.ಫೆ.10ರಿಂದ 16ರ ವರೆಗೆ ನಡೆದ ಟೂರ್ನಿಯಲ್ಲಿ ರಾಜ್ಯದ 16 ವಿಶ್ವವಿದ್ಯಾನಿಲಯಗಳ ತಂಡಗಳು ಪಾಲ್ಗೊಂಡವು. ಮೈಸೂರು ವಿಶ್ವವಿದ್ಯಾನಿಲಯವು ಫೈನಲ್‌ನಲ್ಲಿ ಪಿಇಎಸ್ ವಿಶ್ವವಿದ್ಯಾಲಯದ ವಿರುದ್ಧ 57 ರನ್‌ಗಳಿಂದ ಗೆದ್ದಿತು. ಪಿಇಎಸ್ ವಿಶ್ವವಿದ್ಯಾನಿಲಯ ತಂಡವು ದಯಾನಂದ ಸಾಗರ್ ವಿಶ್ವವಿದ್ಯಾನಿಲಯ, ಸೇಂಟ್ ಜೋಸೆಫ್ ಮತ್ತು ಸಿಎಂಆರ್‌ಯು ತಂಡವನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತ್ತು. ಅತ್ತ ಮೈಸೂರು ವಿಶ್ವವಿದ್ಯಾನಿಲಯವು ಪ್ರೆಸಿಡೆನ್ಸಿ, ಸಿಎಂಆರ್‌ಐಟಿ ಮತ್ತು ರೇವಾ ತಂಡಗಳನ್ನು ಸೋಲಿಸಿ ಫೈನಲ್ ತಲುಪಿತ್ತು. ಚಾಂಪಿಯನ್ ಮೈಸೂರು ವಿವಿ ತಂಡ ₹25,000, ರನ್ನರ್ಸ್ ಅಪ್ ಪಿಇಎಸ್ ತಂಡ ₹15,000 ಮತ್ತು ಪ್ರಶಸ್ತಿ ಪಡೆಯಿತು.ಬಾಗಲೂರಿನ ಲೇಕ್‌ಸೈಡ್ ಕ್ಯಾಂಪಸ್‌ನಲ್ಲಿರುವ ಸಿಎಂಆರ್‌ಯು ಕ್ರಿಕೆಟ್ ಪೆವಿಲಿಯನ್‌ನಲ್ಲಿ ಸಮಾರೋಪ ಸಮಾರಂಭ ನಡೆಯಿತು.ಮಾಜಿ ಭಾರತೀಯ ಕ್ರಿಕೆಟಿಗ ದೊಡ್ಡ ಗಣೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕ್ರೀಡಾಸ್ಫೂರ್ತಿಯ ಮಹತ್ವವನ್ನು ಒತ್ತಿ ಹೇಳಿದರು. ಸಿಎಂಆರ್ ವಿಶ್ವವಿದ್ಯಾನಿಲಯದ ಅತ್ಯಾಧುನಿಕ ಕ್ರಿಕೆಟ್ ಸ್ಟೇಡಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ರಾಜ್ಯಸಭೆ ಸದಸ್ಯ, ಸಿಎಂಆರ್ ಸಂಸ್ಥೆಯ ಮುಖ್ಯಸ್ಥ ಡಾ.ಕೆ.ಸಿ.ರಾಮಮೂರ್ತಿ, ಸಿಎಂಆರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎನ್.ವಿ. ಸುಬ್ಬಾ ರೆಡ್ಡಿ ಮತ್ತು ರಿಜಿಸ್ಟ್ರಾರ್ ಡಾ.ಪ್ರವೀಣ್ ಆರ್. ಸಮಾರಂಭದಲ್ಲಿ ಉಪಸ್ಥಿತರಿದ್ದರು.