ಸಾರಾಂಶ
ನವದೆಹಲಿ: ಯುವ ಕುಸ್ತಿಪಟುವನ್ನು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಕೊಲ್ಲುವ ಮೂಲಕ ಸುದ್ದಿಯಾಗಿದ್ದ ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಸಣ್ಣ ವಿಚಾರಕ್ಕೆ ಸಂಬಂಧಿಸಿದಂತೆ ಯುವ ಕುಸ್ತಿಪಟು ತನ್ನ ಸ್ನೇಹಿತರೊಂದಿಗೆ ಸೇರಿ ಕೋಚ್‌ಗೆ ದೊಣ್ಣೆಯಿಂದ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರದಿಗಳ ಪ್ರಕಾರ, ಮಂಗಳವಾರ ರಾತ್ರಿ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, ಅಂತಾರಾಷ್ಟ್ರೀಯ ರೆಫ್ರಿಯೂ ಆಗಿರುವ ಜೈಬೀರ್ ಸಿಂಗ್ ದಹಿಯಾ ಅವರಿಗೆ ಟ್ರೈನೀ ಕುಸ್ತಿಪಟು ಹಲ್ಲೆ ನಡೆಸಿದ್ದಾರೆ. ಇದರಿಂದ ಜೈಬೀರ್ ತಲೆಗೆ ಗಂಭೀರ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ತಲೆಗೆ 30 ಹೊಲಿಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಆದರೆ ಘಟನೆ ಸಂಬಂಧ ದೂರು ನೀಡಲು ಜೈಬೀರ್ ನಿರಾಕರಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಘಟನೆ ಬಳಿಕ ಕ್ರೀಡಾಂಗಣದ ಹಾಸ್ಟೆಲ್‌ನಲ್ಲಿರುವ ಕುಸ್ತಿಪಟುಗಳನ್ನು ಕ್ರೀಡಾ ಇಲಾಖೆ ಹೊರಹಾಕಿದೆ. ಆದರೆ ರವಿ ದಹಿಯಾ, ಅಮನ್, ದೀಪಕ್ ಪೂನಿಯಾ ಸೇರಿದಂತೆ ಅಗ್ರ ಕುಸ್ತಿಪಟುಗಳು ಕ್ರೀಡಾಂಗಣದಲ್ಲೇ ತರಬೇತಿ ಮುಂದುವರಿಸಿದ್ದಾರೆ.
2021ರಲ್ಲಿ ರಾಷ್ಟ್ರೀಯ ಯುವ ಚಾಂಪಿಯನ್ ಸಾಗರ್ ಧನಕರ್ ಎಂಬವರಿಗೆ ಇದೇ ಕ್ರೀಡಾಂಗಣದಲ್ಲಿ ಸುಶೀಲ್ ಹಲ್ಲೆ ನಡೆಸಿದ್ದರು. ಕೆಲ ದಿನಗಳ ಬಳಿಕ ಸಾಗರ್ ಮೃತಪಟ್ಟಿದ್ದು, 2021ರ ಮೇನಲ್ಲಿ ಸುಶೀಲ್‌ರನ್ನು ಬಂಧಿಸಲಾಗಿತ್ತು. ಅವರು ಈಗಲೂ ಜೈಲಿನಲ್ಲಿದ್ದಾರೆ.