ಸಾರಾಂಶ
ದುಬೈ: ‘ಇಷ್ಟು ದೊಡ್ಡ ಸಂಖ್ಯೆಯ ಪ್ರೇಕ್ಷಕರು ಮೌನಕ್ಕೆ ಜಾರುವುದನ್ನು ನೋಡುವುದಕ್ಕಿಂತ ಸಂತಸದ ವಿಷಯ ಮತ್ತೊಂದಿಲ್ಲ’. ಮಂಗಳವಾರ ದುಬೈನಲ್ಲಿ ಪ್ಯಾಟ್ ಕಮಿನ್ಸ್ ಇಲ್ಲದೇ ಇರಬಹುದು, ಆದರೆ ನ.18, 2023ರಂದು ಅವರಾಡಿದ ಈ ಮಾತುಗಳು ಭಾರತೀಯ ಆಟಗಾರರು, ಅಭಿಮಾನಿಗಳ ಮನದಲ್ಲಿ ಪ್ರತಿಧ್ವನಿಸಲಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯಾ ಎದುರಾಗಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಮೊದಲ ಬಾರಿಗೆ ಮದಗಜಗಳು ಮುಖಾಮುಖಿಯಾಗಲಿವೆ.
ವಿಶ್ವಕಪ್ ಫೈನಲ್ ನಡೆದು ಹಲವು ತಿಂಗಳುಗಳು ಕಳೆದಿವೆ. ಮಂಗಳವಾರದ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಿರುವ ಭಾರತ, ಖಂಡಿತವಾಗಿಯೂ ಆಸ್ಟ್ರೇಲಿಯಾಕ್ಕಿಂತ ಬಲಿಷ್ಠವಾಗಿದೆ. ಆದರೆ, ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾವನ್ನು ಲಘುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎನ್ನುವ ಸತ್ಯ ರೋಹಿತ್ ಶರ್ಮಾ ಪಡೆಗೆ ಚೆನ್ನಾಗೇ ತಿಳಿದಿದೆ. ಹೆಡ್ ಭಯ: ಎರಡೂ ತಂಡಗಳ ನಡುವಿನ ಅಂತರ, 2023ರ ಫೈನಲ್‌ಗಿಂತ ದೊಡ್ಡದಿದೆ. ಈ ಬಾರಿ ಆಸೀಸ್ ತಂಡದಲ್ಲಿ ಅನುಭವಿ ವೇಗಿಗಳಾದ ಸ್ಟಾರ್ಕ್, ಕಮಿನ್ಸ್, ಹೇಜಲ್‌ವುಡ್ ಇಲ್ಲ. ವಾರ್ನರ್‌ರಂಥ ಪ್ರಚಂಡ ಬ್ಯಾಟರ್ ಇಲ್ಲ. ಸ್ಟೋಯ್ನಿಸ್‌ರಂಥ ಅಪಾಯಕಾರಿ ಆಲ್ರೌಂಡರ್ ಇಲ್ಲ. ಸಾಲದಕ್ಕೆ ಆಲ್ರೌಂಡರ್ ಆಗಿ ಕೊಡುಗೆ ನೀಡಬಲ್ಲ ಮ್ಯಾಥ್ಯೂ ಶಾರ್ಟ್ ಗಾಯಗೊಂಡು ಹೊರಬಿದ್ದಿದ್ದಾರೆ. ಆದರೂ, ಭಾರತೀಯರಿಗೆ ಒಬ್ಬ ಆಟಗಾರನ ಭಯ ಇದ್ದೇ ಇದೆ. ಆತನೇ ಟ್ರ್ಯಾವಿಸ್ ಹೆಡ್. 2023ರ ಏಕದಿನ ವಿಶ್ವಕಪ್ ಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಹೆಡ್ ಕೊಟ್ಟ ಪೆಟ್ಟನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ. ಹೀಗಾಗಿ, ಫೈನಲ್‌ಗೇರಬೇಕಿದ್ದರೆ ಆಸ್ಟ್ರೇಲಿಯಾದ ತಲೆ (ಹೆಡ್) ಉರುಳಿಸಬೇಕು ಎನ್ನುವುದು ಭಾರತೀಯರಿಗೆ ಚೆನ್ನಾಗೇ ಗೊತ್ತಿದೆ.
ಶಾರ್ಟ್ ಹೊರಬಿದ್ದಿರುವುದರಿಂದ ಜೋಶ್ ಇಂಗ್ಲಿಸ್ ಆರಂಭಿಕನಾಗಿ ಆಡುವ ಸಾಧ್ಯತೆ ಹೆಚ್ಚು. ಆಗ ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕ ಸ್ವಲ್ಪ ದುರ್ಬಲಗೊಳ್ಳಲಿದೆ. ಆದರೂ, ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದಾರೆ ಎನ್ನುವುದನ್ನು ಮರೆಯುವಂತಿಲ್ಲ. ವರುಣ್ ಟ್ರಂಪ್‌ಕಾರ್ಡ್: ಭಾರತ ಈ ಪಂದ್ಯದಲ್ಲೂ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಅವಲಂಬಿತಗೊಳ್ಳಲಿದೆ. ಕಿವೀಸ್ ವಿರುದ್ಧ ಭಾರತದ ನಾಲ್ವರು ಸ್ಪಿನ್ನರ್‌ಗಳು ಒಟ್ಟು 39 ಓವರ್ ಬೌಲ್ ಮಾಡಿ 9 ವಿಕೆಟ್ ಕಬಳಿಸಿದ್ದರು. ನಾಲ್ವರ ಸ್ಪೆಲ್‌ಗಳಲ್ಲಿ ಒಟ್ಟು 128 ಡಾಟ್ ಬಾಲ್‌ಗಳಿದ್ದವು. ಈ ಪಂದ್ಯದಲ್ಲೂ ವರುಣ್ ಚಕ್ರವರ್ತಿಯೇ ಭಾರತದ ಟ್ರಂಪ್ ಕಾರ್ಡ್ ಆದರೆ ಅಚ್ಚರಿಯಿಲ್ಲ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್‌ರಿಂದ ದೊಡ್ಡ ಇನ್ನಿಂಗ್ಸ್ ನಿರೀಕ್ಷೆ ಮಾಡಲಾಗುತ್ತಿದೆ. ಗುಂಪು ಹಂತದ ಮೂರೂ ಪಂದ್ಯದಲ್ಲಿ ರೋಹಿತ್ ಸ್ಫೋಟಕ ಆರಂಭ ನೀಡುವ ಪ್ರಯತ್ನ ನಡೆಸಿದರೂ, ದೊಡ್ಡ ಸ್ಕೋರ್ ಬಂದಿಲ್ಲ. ಈ ಪಂದ್ಯದಲ್ಲಿ ಅವರು ಹೆಚ್ಚು ಕಾಲ ಕ್ರೀಸ್‌ನಲ್ಲಿ ಉಳಿಯಬೇಕಿದೆ. ಕೊಹ್ಲಿ, ಗಿಲ್, ಶ್ರೇಯಸ್, ರಾಹುಲ್, ಹಾರ್ದಿಕ್, ಅಕ್ಷರ್, ಜಡೇಜಾ ಹೀಗೆ ಭಾರತದ ಬ್ಯಾಟಿಂಗ್ ಪಡೆ ದೊಡ್ಡದಿದ್ದು, ಎಲ್ಲವೂ ಅಂದುಕೊಂಡಂತೆ ನಡೆಯಬೇಕು ಅಷ್ಟೇ. ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ (ನಾಯಕ), ಶುಭ್‌ಮನ್ ಗಿಲ್, ಕೊಹ್ಲಿ, ಶ್ರೇಯಸ್, ರಾಹುಲ್, ಅಕ್ಷರ್, ಪಾಂಡ್ಯ, ಜಡೇಜಾ, ಕುಲ್ದೀಪ್, ಶಮಿ, ವರುಣ್.
ಆಸ್ಟ್ರೇಲಿಯಾ: ಹೆಡ್, ಇಂಗ್ಲಿಸ್, ಸ್ಮಿತ್ (ನಾಯಕ), ಲಬುಶೇನ್, ಕೂಪರ್, ಕೇರಿ, ಮ್ಯಾಕ್ಸ್‌ವೆಲ್, ಡ್ವಾರ್ಶಿಯಸ್, ಎಲ್ಲೀಸ್, ಜಾನ್ಸನ್, ಜಂಪಾ. ಪಂದ್ಯ ಆರಂಭ: ಮಧ್ಯಾಹ್ನ 2.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್ ಪಿಚ್ ರಿಪೋರ್ಟ್
ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಬಳಸಿದ ಪಿಚ್‌ನಲ್ಲಿಯೇ ಈ ಪಂದ್ಯ ನಡೆಯಲಿದೆ. ಪಂದ್ಯ ಸಾಗಿದಂತೆ ಪಿಚ್ ನಿಧಾನಗೊಳ್ಳಲಿದ್ದು, ಸ್ಪಿನ್ನರ್‌ಗಳು ಹೆಚ್ಚು ಪರಿಣಾಮಕಾರಿಯಾಗಲಿದ್ದಾರೆ. ಇಬ್ಬನಿಯ ಸಮಸ್ಯೆ ಇಲ್ಲದಿರುವ ಕಾರಣ, ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಲು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. 270-280 ರನ್ ಗೆಲ್ಲುವ ಸ್ಕೋರ್ ಆಗಬಹುದು.
2011ರ ಬಳಿಕ ಭಾರತಕ್ಕೆ ನಾಕೌಟಲ್ಲಿ ಸಿಕ್ಕಿಲ್ಲ ಜಯ!
ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಭಾರತಕ್ಕೆ 2011ರ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಸಾಧ್ಯವಾಗಿಲ್ಲ. 2011ರ ಏಕದಿನ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದಿದ್ದೇ ಕೊನೆ. ಆ ಬಳಿಕ 2015ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್, 2023ರ ಏಕದಿನ ವಿಶ್ವಕಪ್‌ನ ಫೈನಲ್, 2023ರ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸೀಸ್ ವಿರುದ್ಧ ಭಾರತ ಸೋತಿದೆ. ==
ಚಾಂಪಿಯನ್ಸ್ ಟ್ರೋಫಿ: 2009ರ ಬಳಿಕ ಮೊದಲ ಮುಖಾಮುಖಿ!
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ 2009ರ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ವರೆಗೂ ಉಭಯ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯಲ್ಲಿ 4 ಪಂದ್ಯಗಳು ನಡೆದಿದ್ದು, 2ರಲ್ಲಿ ಭಾರತ, 1ರಲ್ಲಿ ಆಸೀಸ್ ಗೆದ್ದಿದೆ. 2009ರ ಪಂದ್ಯ ಮಳೆಗೆ ಬಲಿಯಾಗಿತ್ತು.
)

;Resize=(128,128))
;Resize=(128,128))
;Resize=(128,128))
;Resize=(128,128))