ದೇಸಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ಮುಂಬೈನ ದಿಗ್ಗಜ ಸ್ಪಿನ್ನರ್‌ ಪದ್ಮಾಕರ್‌ ಶಿವಾಲ್ಕರ್‌ ನಿಧನ

| N/A | Published : Mar 04 2025, 12:34 AM IST / Updated: Mar 04 2025, 04:05 AM IST

ಸಾರಾಂಶ

ದೇಸಿ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಸಂಪಾದಿಸಿರುವ ಪದ್ಮಾಕರ್‌ ಶಿವಾಲ್ಕರ್‌. 589 ಪ್ರಥಮ ದರ್ಜೆ ವಿಕೆಟ್ ಪಡೆದಿದ್ದ ಎಡಗೈ ಸ್ಪಿನ್‌ ಬೌಲರ್‌. ಸುನಿಲ್‌ ಗವಾಸ್ಕರ್‌ ಸೇರಿ ಹಲವು ಕ್ರಿಕೆಟಿಗರಿಂದ ಸಂತಾಪ.

ಮುಂಬೈ: ಭಾರತೀಯ ದೇಸಿ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್‌, ಮುಂಬೈನ ಪದ್ಮಾಕರ್‌ ಶಿವಾಲ್ಕರ್‌ (84) ವಯೋ ಸಹಜ ಕಾಯಿಲೆಗಳಿಂದಾಗಿ ಸೋಮವಾರ ನಿಧನರಾದರು.

ಅತ್ಯುತ್ತಮ ಸ್ಪಿನ್ನರ್‌ ಆಗಿದ್ದರೂ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆಯದ ಪದ್ಮಾಕರ್‌, ದೇಸಿ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 1961-62ರಿಂದ 1987-88ರ ವರೆಗೂ ಒಟ್ಟು 124 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು, 19.69ರ ಸರಾಸರಿಯಲ್ಲಿ 589 ವಿಕೆಟ್‌ ಕಬಳಿಸಿದ್ದಾರೆ.

22ನೇ ವಯಸ್ಸಿನಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಪದ್ಮಾಕರ್‌ ತಮ್ಮ 48ನೇ ವಯಸ್ಸಿನ ವರೆಗೂ ಸಕ್ರಿಯರಾಗಿದ್ದರು. ರಣಜಿಯಲ್ಲಿ ಒಟ್ಟು 361 ವಿಕೆಟ್‌ ಕಬಳಿಸಿದ್ದ ಅವರು, 12 ಲಿಸ್ಟ್‌ ‘ಎ’ ಪಂದ್ಯಗಳನ್ನಾಡಿ 16 ವಿಕೆಟ್‌ ಪಡೆದಿದ್ದರು.

2017ರಲ್ಲಿ ಪದ್ಮಾಕರ್‌ಗೆ ಬಿಸಿಸಿಐ, ಸಿ.ಕೆ.ನಾಯ್ಡು ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತ್ತು. ಪದ್ಮಾಕರ್‌ರ ನಿಧನಕ್ಕೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.