ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ : ಸಿನ್ನರ್‌, ಸ್ವಿಯಾಟೆಕ್‌ ಕ್ವಾರ್ಟರ್‌ ಫೈನಲ್‌ಗೆ

| Published : Sep 04 2024, 01:49 AM IST / Updated: Sep 04 2024, 04:46 AM IST

ಸಾರಾಂಶ

ಈ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಮೆಡ್ವೆಡೆವ್‌ರನ್ನು ಸೋಲಿಸಿ ಸಿನ್ನರ್‌ ಚಾಂಪಿಯನ್‌ ಆಗಿದ್ದರು. ಮಾಜಿ ಚಾಂಪಿಯನ್‌ ಮೆಡ್ವೆಡೆವ್‌, ಸಬಲೆಂಕಾ ಕೂಡಾ ಕ್ವಾರ್ಟರ್‌ಗೆ. ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಸೆಮೀಸ್‌ಗೆ.

ನ್ಯೂಯಾರ್ಕ್‌: ವಿಶ್ವ ನಂ.1 ಟೆನಿಸಿಗರಾದ ಇಟಲಿಯ ಯಾನ್ನಿಕ್‌ ಸಿನ್ನರ್‌ ಹಾಗೂ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಚೊಚ್ಚಲ ಯುಎಸ್ ಓಪನ್‌ ಗೆಲ್ಲುವ ನಿರೀಕ್ಷೆಯಲ್ಲಿರುವ 23 ವರ್ಷದ ಸಿನ್ನರ್‌, ಮಂಗಳವಾರ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಅಮೆರಿಕದ ಟಾಮಿ ಪೌಲ್‌ ವಿರುದ್ಧ 7-6(3), 7-6(5), 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 2021ರ ಚಾಂಪಿಯನ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಪೋರ್ಚುಗಲ್‌ನ ನ್ಯುನೊ ಬೊರ್ಗೆಸ್‌ ವಿರುದ್ಧ 6-0, 6-1, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಕ್ವಾರ್ಟರ್‌ ಫೈನಲ್‌ನಲ್ಲಿ ಸಿನ್ನರ್‌ ಹಾಗೂ ಮೆಡ್ವೆಡೆವ್‌ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಈ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನಲ್ಲಿ ಮೆಡ್ವೆಡೆವ್‌ರನ್ನು ಸೋಲಿಸಿ ಸಿನ್ನರ್‌ ಚಾಂಪಿಯನ್‌ ಆಗಿದ್ದರು.

ಸ್ವಿಯಾಟೆಕ್‌ಗೆ ಓಟಕ್ಕಿಲ್ಲ ಬ್ರೇಕ್‌: 2022ರ ಚಾಂಪಿಯನ್‌ ಇಗಾ ಪ್ರಿ ಕ್ವಾರ್ಟರ್‌ನಲ್ಲಿ ರಷ್ಯಾದ ಸಮ್ಸೊನೊವಾ ವಿರುದ್ಧ 6-4, 6-1 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 6ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಇಗಾ ಕ್ವಾರ್ಟರ್‌ನಲ್ಲಿ ಅಮೆರಿಕದ 5ನೇ ಶ್ರೇಯಾಂಕಿತ ಜೆಸ್ಸಿಕಾ ಪೆಗುಲಾ ವಿರುದ್ಧ ಸೆಣಸಲಿದ್ದಾರೆ. ಪೆಗುಲಾ ಪ್ರಿ ಕ್ವಾರ್ಟರ್‌ನಲ್ಲಿ ರಷ್ಯಾದ ಡಯಾನಾ ವಿರುದ್ಧ ಗೆದ್ದಿದ್ದರು. ಬ್ರೆಜಿಲ್‌ನ ಹದ್ದಾದ್‌ ಮಿಯಾ, ಚೆಕ್‌ ಗಣರಾಜ್ಯದ ಕ್ಯಾರೊಲಿನಾ ಮುಕೋವಾ ಕೂಡಾ ಕ್ವಾರ್ಟರ್‌ಗೇರಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಸೆಮೀಸ್‌ಗೆ

ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಹಾಗೂ ಇಂಡೋನೇಷ್ಯಾದ ಆಲ್ದಿಲಾ ಸುಟ್ಜಿಯಾಡಿ ಯುಎಸ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. 8ನೇ ಶ್ರೇಯಾಂಕಿತ ಜೋಡಿ ಸೋಮವಾರ ರಾತ್ರಿ ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌-ಚೆಕ್‌ ಗಣರಾಜ್ಯದ ಬಾರ್ಬೊರಾ ಕ್ರೆಜಿಕೋವಾ ವಿರುದ್ಧ 7-6(4), 2-6, 10-7ರಲ್ಲಿ ಗೆಲುವು ಸಾಧಿಸಿತು. ಅಂತಿಮ 4ರ ಘಟ್ಟದ ಪಂದ್ಯದಲ್ಲಿ ಬೋಪಣ್ಣ-ಆಲ್ದಿಲಾ ಜೋಡಿಗೆ ಅಮೆರಿಕದ ಡೊನಾಲ್ಡ್‌ ಯಂಗ್‌-ಟೇಲರ್‌ ಟೌನ್‌ಸೆಂಡ್‌ ಸವಾಲು ಎದುರಾಗಲಿದೆ. ಪುರುಷರ ಡಬಲ್ಸ್‌ನಲ್ಲಿ ಈಗಾಗಲೇ ಬೋಪಣ್ಣ ಹೊರಬಿದ್ದಿದ್ದಾರೆ.