ಸಾರಾಂಶ
ಲಾಡೆರ್‌ಹಿಲ್(ಫ್ಲೋರಿಡಾ): ಈ ಬಾರಿ ಟಿ20 ವಿಶ್ವಕಪ್‌ನ ಸೂಪರ್-8ಕ್ಕೇರುವ ಮಾಜಿ ಚಾಂಪಿಯನ್ ಪಾಕಿಸ್ತಾನದ ಕನಸು ನುಚ್ಚುನೂರಾಗಿದೆ. ಚೊಚ್ಚಲ ಬಾರಿ ಟಿ20 ವಿಶ್ವಕಪ್ ಆಡುತ್ತಿರುವ ಆತಿಥೇಯ ಅಮೆರಿಕ ತಂಡ ಮುಂದಿನ ಹಂತಕ್ಕೆ ಲಗ್ಗೆ ಇಟ್ಟಿದೆ.
ಭಾರಿ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿದ್ದರಿಂದ ಶುಕ್ರವಾರದ ಐರ್ಲೆಂಡ್ ಹಾಗೂ ಅಮೆರಿಕ ನಡುವಿನ ಪಂದ್ಯ ರದ್ದುಗೊಂಡಿತು. ರಾತ್ರಿ 8 ಗಂಟೆಗೆ ಆರಂಭಗೊಳ್ಳಬೇಕಿದ್ದ ಪಂದ್ಯ ಸುಮಾರು 3 ಗಂಟೆಗಳ ಕಾಯುವಿಕೆ ಬಳಿಕವೂ ಆರಂಭಗೊಳ್ಳಲಿಲ್ಲ. ಹೀಗಾಗಿ ಇತ್ತಂಡಗಳು ತಲಾ 1 ಅಂಕ ಹಂಚಿಕೊಂಡವು. ಇದರೊಂದಿಗೆ ಅಮೆರಿಕ 4 ಪಂದ್ಯಗಳಲ್ಲಿ ಒಟ್ಟು 5 ಅಂಕದೊಂದಿಗೆ ‘ಎ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಸೂಪರ್-8 ಹಂತಕ್ಕೆ ಪ್ರವೇಶಿಸಿತು. ಪಾಕಿಸ್ತಾನ ಆಡಿರುವ 3 ಪಂದ್ಯಗಳಲ್ಲಿ 2 ಅಂಕ ಸಂಪಾದಿಸಿದ್ದು, ಭಾನುವಾರ ಐರ್ಲೆಂಡ್ ವಿರುದ್ಧ ಗೆದ್ದರೂ 4 ಅಂಕ ಆಗುವುದರಿಂದ ಸೂಪರ್-8ಕ್ಕೇರುವ ಅವಕಾಶ ಕಳೆದುಕೊಂಡಿತು. ಪಾಕ್ ಜೊತೆಗೆ ಕೆನಡಾ, ಐರ್ಲೆಂಡ್ ತಂಡಗಳೂ ಟೂರ್ನಿಯಿಂದ ಹೊರಬಿದ್ದಿವೆ.
2026ರ ವಿಶ್ವಕಪ್‌ಗೆ ಅಮೆರಿಕ ಅರ್ಹತೆ
ಈ ಬಾರಿ ಟೂರ್ನಿಯಲ್ಲಿ ಅಗ್ರ-8ರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಾರಣ ಅಮೆರಿಕ 2026ರ ಟಿ20 ವಿಶ್ವಕಪ್‌ಗೂ ನೇರ ಪ್ರವೇಶ ಪಡೆಯಿತು.