ಸತತ 2ನೇ ಬಾರಿ ವಿಂಬಲ್ಡನ್‌ ಫೈನಲ್‌ಗೆ ಆಲ್ಕರಜ್‌

| Published : Jul 13 2024, 01:38 AM IST / Updated: Jul 13 2024, 04:46 AM IST

ಸಾರಾಂಶ

ಸೆಮೀಸ್‌ನಲ್ಲಿ ಮೆಡ್ವೆಡೆವ್‌ ವಿರುದ್ಧ ಜಯ. ಆಲ್ಕರಜ್‌ಗೆ 4ನೇ ಗ್ರ್ಯಾನ್‌ಸ್ಲಾಂ ಫೈನಲ್‌. ಮೆಡ್ವೆಡೆವ್‌ಗೆ ಸತತ 2ನೇ ಬಾರಿ ವಿಂಬಲ್ಡನ್‌ ಸೆಮೀಸ್‌ ಸೋಲು.

ಲಂಡನ್‌: ಟೆನಿಸ್‌ ಲೋಕದ ಹೊಸ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಸತತ 2ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಇದರೊಂದಿಗೆ 4ನೇ ಬಾರಿ ಗ್ರ್ಯಾನ್‌ಸ್ಲಾಂ ಗೆಲ್ಲುವ ಹಾದಿಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 

ಆದರೆ ಮೊದಲ ಬಾರಿಗೆ ವಿಂಬಲ್ಡನ್‌ ಫೈನಲ್‌ ಪ್ರವೇಶಿಸಲು ಹಾತೊರೆಯುತ್ತಿದ್ದ ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಕನಸು ಭಗ್ನಗೊಂಡಿತು.ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ ಹಣಾಹಣಿಯಲ್ಲಿ 21 ವರ್ಷದ ಆಲ್ಕರಜ್‌, 5ನೇ ಶ್ರೇಯಾಂಕಿತ ಮೆಡ್ವೆಡೆವ್‌ ವಿರುದ್ಧ 6-7(1/7), 6-3, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಆರಂಭಿಕ ಸೆಟ್‌ ಕಳೆದುಕೊಂಡ ಹೊರತಾಗಿಯೂ ಬಳಿಕ ಪುಟಿದೆದ್ದ ಸ್ಪೇನ್‌ನ ಆಲ್ಕರಜ್‌, ತಮ್ಮ ಪ್ರಬಲ ಹೊಡೆತಗಳ ಮೂಲಕ ರಷ್ಯಾ ಆಟಗಾರರನನ್ನು ಕಟ್ಟಿಹಾಕಿದರು. 2021ರ ಯುಎಸ್‌ ಓಪನ್‌ ಚಾಂಪಿಯನ್‌ ಆಗಿರುವ ಮೆಡ್ವೆಡೆವ್‌ 3ನೇ ಸೆಟ್‌ನಲ್ಲಿ ಆಲ್ಕರಜ್‌ಗೆ ಉತ್ತಮ ಪೈಪೋಟಿ ನೀಡಿದರಾದರೂ, ಪಂದ್ಯವನ್ನು ತಮ್ಮತ್ತ ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇದರೊಂದಿಗೆ ವಿಂಬಲ್ಡನ್‌ನಲ್ಲಿ ಸತತ 2ನೇ ಬಾರಿಯೂ ಮೆಡ್ವೆಡೆವ್‌ ಸೆಮಿಫೈನಲ್‌ನಲ್ಲಿ ಅಭಿಯಾನ ಕೊನೆಗೊಳಿಸಿದರು. ಕಳೆದ ವರ್ಷ ಕೂಡಾ ಮೆಡ್ವೆಡೆವ್‌ಗೆ ಆಲ್ಕರಜ್‌ ವಿರುದ್ಧ ಅಂತಿಮ 4ರ ಸುತ್ತಿನ ಪಂದ್ಯದಲ್ಲಿ ಸೋಲು ಎದುರಾಗಿತ್ತು.

ಈ ವರ್ಷ 2ನೇ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ ಆಲ್ಕರಜ್‌

ಆಲ್ಕರಜ್‌ 21ನೇ ವರ್ಷಕ್ಕೇ 4ನೇ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದಾರೆ. ಈ ವರ್ಷ ಅವರಿಗಿದು 2ನೇ ಫೈನಲ್‌. ಇತ್ತೀಚೆಗಷ್ಟೇ ಅವರು ಫ್ರೆಂಚ್‌ ಓಪನ್‌ ಫೈನಲ್‌ಗೇರಿದ್ದರು. ಅದಕ್ಕೂ ಮುನ್ನ 2022ರಲ್ಲಿ ಯುಎಸ್‌ ಓಪನ್‌, 2023ರಲ್ಲಿ ವಿಂಬಲ್ಡನ್‌ ಚಾಂಪಿಯನ್‌ ಆಗಿದ್ದರು. ಅವರು ಈ ವರೆಗೂ ಫೈನಲ್‌ನಲ್ಲಿ ಸೋತಿಲ್ಲ. 3 ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿ 3 ಬಾರಿಯೂ ಚಾಂಪಿಯನ್‌ ಎನಿಸಿಕೊಂಡಿದ್ದಾರೆ.