ಸಾರಾಂಶ
ಬೆಂಗಳೂರು: ಸಾಮಾಜಿಕ ತಾಣಗಳಲ್ಲಿ ಆರ್‌ಸಿಬಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ತನ್ನ ಅಧಿಕೃತ ಎಕ್ಸ್ (ಟ್ವೀಟರ್) ಖಾತೆಯಲ್ಲಿ ಮಾಡಿರುವ ಪೋಸ್ಟ್ ಒಂದು ಇದೀಗ ಭಾರಿ ವೈರಲ್ ಆಗಿದೆ. ಭಾನುವಾರ ಆರ್‌ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಅಧಿಕೃತ ಟ್ವೀಟರ್ ಖಾತೆ ಮೂಲಕ ಕನ್ನಡದಲ್ಲಿ ‘ನಮಸ್ಕಾರ ಬೆಂಗಳೂರು, ಭೇಟಿಯಾಗೋಣ ಚಿನ್ನಸ್ವಾಮಿಯಲ್ಲಿ’ ಎಂದು ಬರೆದಿತ್ತು.
ಪಂದ್ಯ ಮುಗಿದ ಬಳಿಕ ಡೆಲ್ಲಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ, ‘ಭೇಟಿ ಆಗೋಕೆ ಬಂದು ಬೇಟೆ ಆಗೋದ್ರು’ ಎಂದಿದೆ. ಆರ್‌ಸಿಬಿಯ ಈ ಪೋಸ್ಟ್‌ಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಪಂದ್ಯದಲ್ಲಿ ಅಭೂತಪೂರ್ವ ಪ್ರದರ್ಶನ ತೋರಿದ ಆರ್‌ಸಿಬಿ 47 ರನ್ ಗೆಲುವು ಸಾಧಿಸಿತ್ತು.
ಸತತ 5 ಗೆಲುವಿನೊಂದಿಗೆ ತಂಡ ಪ್ಲೇ-ಆಫ್‌ರೇಸ್‌ನಲ್ಲಿ ಮುಂಚೂಣಿಗೆ ಬಂದು ನಿಂತಿದೆ. ನೆಟ್ ರನ್‌ರೇಟನ್ನೂ ಸಾಕಷ್ಟು ಹೆಚ್ಚಿಸಿಕೊಂಡು ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಅತ್ತ ಡೆಲ್ಲಿ 13ರಲ್ಲಿ 7ನೇ ಸೋಲು ಕಂಡಿದ್ದು, ಪ್ಲೇ-ಆಫ್ ರೇಸ್‌ನಲ್ಲಿ ಹಿಂದಕ್ಕೆ ಬಿದ್ದಿದೆ.ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಉತ್ತಮ ಆರಂಭದ ಹೊರತಾಗಿಯೂ ಕಲೆಹಾಕಿದ್ದು 9 ವಿಕೆಟ್‌ಗೆ 187 ರನ್. ಚಿನ್ನಸ್ವಾಮಿಯಲ್ಲಿ ಈ ಮೊತ್ತ ಯಾವುದೇ ತಂಡಕ್ಕೂ ಚೇಸ್ ಮಾಡಬಹುದಾದ ಮೊತ್ತ. ಆದರೆ ಆರ್‌ಸಿಬಿಯ ಅನಿರೀಕ್ಷಿತ ಬೆಂಕಿ ಬೌಲಿಂಗ್ ದಾಳಿ ಡೆಲ್ಲಿಯನ್ನು ಕಂಗೆಟ್ಟಿಸಿತು. ಫೀಲ್ಡಿಂಗ್ ಕೂಡ ಅಮೋಘವಾಗಿದ್ದ ಕಾರಣ ಡೆಲ್ಲಿ 19.1 ಓವರಲ್ಲಿ ಆಲೌಟ್ ಆಯಿತು.