ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಹಾಕಿ ಕಂಚು ಕೊರಳಿಗೇರಿಸುತ್ತಾ ಭಾರತ? ಸ್ಪೇನ್‌ ವಿರುದ್ಧ ಸೆಣಸು

| Published : Aug 08 2024, 01:35 AM IST / Updated: Aug 08 2024, 04:22 AM IST

ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಹಾಕಿ ಕಂಚು ಕೊರಳಿಗೇರಿಸುತ್ತಾ ಭಾರತ? ಸ್ಪೇನ್‌ ವಿರುದ್ಧ ಸೆಣಸು
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್‌ ವಿರುದ್ಧ ಸೆಣಸು. ಟೋಕಿಯೋ ಬಳಿಕ ಭಾರತಕ್ಕೆ ಮತ್ತೊಂದು ಪದಕ ನಿರೀಕ್ಷೆ. ಭಾರತದ ಮಹಾಗೋಡೆ ಶ್ರೀಜೇಶ್‌ಗೆ ಕೊನೆ ಪಂದ್ಯ

ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದ ಭಾರತ ಪುರುಷರ ಹಾಕಿ ತಂಡ, ಪ್ಯಾರಿಸ್‌ನಲ್ಲಿ ಮತ್ತೊಂದು ಕಂಚಿನ ಪದಕ ಗೆಲ್ಲುವ ಕಾತರದಲ್ಲಿದೆ. 

ಗುರುವಾರ ಸ್ಪೇನ್‌ ವಿರುದ್ಧ ಭಾರತ ತಂಡ ಕಂಚಿನ ಪದಕ ಪಂದ್ಯದಲ್ಲಿ ಸೆಣಸಾಡಲಿದೆ.1980ರ ಬಳಿಕ ಚಿನ್ನ ಗೆಲ್ಲುವ ವಿಶ್ವಾಸದೊಂದಿಗೆ ಪ್ಯಾರಿಸ್‌ಗೆ ತೆರಳಿದ್ದ ಭಾರತ ತಂಡ, ಗುಂಪು ಹಂತದಲ್ಲಿ ಉತ್ತಮ ಪ್ರದರ್ಶನ ತೋರಿತ್ತು. ಅಜೇಯವಾಗಿ ನಾಕೌಟ್‌ಗೇರಿದ್ದ ಹರ್ಮನ್‌ಪ್ರೀತ್‌ ಸಿಂಗ್‌ ನಾಯಕತ್ವದ ಭಾರತ, ಕ್ವಾರ್ಟರ್‌ ಫೈನಲ್‌ನಲ್ಲಿ ಬ್ರಿಟನ್‌ ವಿರುದ್ಧ ಗೆಲುವು ಸಾಧಿಸಿತ್ತು. 

ಆದರೆ ಮಂಗಳವಾರ ಜರ್ಮನಿ ವಿರುದ್ಧ ಸೆಮಿಫೈನಲ್‌ನಲ್ಲಿ ಆಘಾತಕಾರಿ ಸೋಲನುಭವಿಸಿತ್ತು. ಈ ಮೂಲಕ 44 ವರ್ಷಗಳ ಬಳಿಕ ಮತ್ತೆ ಫೈನಲ್‌ಗೇರುವ ಅವಕಾಶವನ್ನು ಕೈಚೆಲ್ಲಿತ್ತು. ತಂಡ ಟೂರ್ನಿಯುದ್ದಕ್ಕೂ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಗುತ್ತಿದೆ.

 ಈ ವರೆಗಿನ ಒಟ್ಟು 7 ಪಂದ್ಯಗಳಲ್ಲಿ ಭಾರತಕ್ಕೆ ಒಟ್ಟು 52 ಪೆನಾಲ್ಟಿ ಕಾರ್ನರ್‌ಗಳು ಸಿಕ್ಕಿದ್ದು, ಕೇವಲ 8 ಗೋಲು ದಾಖಲಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಮಾತ್ರ ಭಾರತಕ್ಕೆ ಗೆಲುವು ಸುಲಭವಾಗಲಿದೆ.

 ಇನ್ನು, ಟೂರ್ನಿಯಲ್ಲಿ ಈ ವರೆಗೂ ಭಾರತ ಒಟ್ಟು 13 ಗೋಲುಗಳನ್ನು ಬಾರಿಸಿದ್ದು, ಇದರಲ್ಲಿ 8 ಹರ್ಮನ್‌ಪ್ರೀತ್‌ರಿಂದಲೇ ದಾಖಲಾಗಿದೆ. ಹೀಗಾಗಿ, ಉಳಿದ ಆಟಗಾರರೂ ಹೆಚ್ಚು ಜವಾಬ್ದಾರಿ ವಹಿಸಬೇಕಿದೆ. ಸ್ಪೇನ್‌ ವಿರುದ್ಧ ಭಾರತ ತಂಡ ಕಳೆದ 5 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದ್ದು, ಮತ್ತೊಮ್ಮೆ ಗೆಲ್ಲುವ ಕಾತರದಲ್ಲಿದೆ. ಅತ್ತ, ಸ್ಪೇನ್‌ ತಂಡ ಸೆಮಿಫೈನಲ್‌ನಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಸೋತಿತ್ತು. ಕೂಟದ ಫೈನಲ್‌ ಪಂದ್ಯ ಗುರುವಾರವೇ ನಡೆಯಲಿದ್ದು, ಜರ್ಮನಿ ಹಾಗೂ ನೆದರ್‌ಲೆಂಡ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

11ನೇ ಪಂದ್ಯ

ಭಾರತ ಹಾಗೂ ಸ್ಪೇನ್‌ ಒಲಿಂಪಿಕ್ಸ್‌ನಲ್ಲಿ 11ನೇ ಬಾರಿ ಮುಖಾಮುಖಿಯಾಗುತ್ತಿವೆ. ಈ ಹಿಂದಿನ 10 ಪಂದ್ಯಗಳಲ್ಲಿ ಭಾರತ 7ರಲ್ಲಿ ಗೆದ್ದಿದ್ದರೆ, ಸ್ಪೇನ್‌ 1ರಲ್ಲಿ ಜಯಗಳಿಸಿದೆ. 2 ಪಂದ್ಯ ಡ್ರಾಗೊಂಡಿವೆ.

ಭಾರತದ ಮಹಾಗೋಡೆ ಶ್ರೀಜೇಶ್‌ಗೆ ಕೊನೆ ಪಂದ್ಯ

ಭಾನುವಾರದ ಕಂಚಿನ ಪದಕ ಪಂದ್ಯ, ಭಾರತದ ದಿಗ್ಗಜ ಗೋಲ್‌ಕೀಪರ್‌ ಶ್ರೀಜೇಶ್‌ ಪಾಲಿಗೆ ಕೊನೆ ಅಂತಾರಾಷ್ಟ್ರೀಯ ಪಂದ್ಯ. ಅವರು ಈಗಾಗಲೇ ತಮ್ಮ ನಿವೃತ್ತಿ ಘೋಷಿಸಿದ್ದು, ಕಂಚಿನ ಪದಕದ ಗೆಲುವಿನೊಂದಿಗೆ ತಮ್ಮ ಹಾಕಿ ವೃತ್ತಿ ಬದುಕಿಗೆ ತೆರೆ ಎಳೆಯುವ ಕಾತರದಲ್ಲಿದ್ದಾರೆ. 

2006ರಲ್ಲಿ ಪಾದಾರ್ಪಣೆ ಮಾಡಿದ್ದ ಶ್ರೀಜೇಶ್‌ ಈ ವರೆಗೂ ಭಾರತದ ಪರ 330ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.ಭಾನುವಾರದ ಕಂಚಿನ ಪದಕ ಪಂದ್ಯ, ಭಾರತದ ದಿಗ್ಗಜ ಗೋಲ್‌ಕೀಪರ್‌ ಶ್ರೀಜೇಶ್‌ ಪಾಲಿಗೆ ಕೊನೆ ಅಂತಾರಾಷ್ಟ್ರೀಯ ಪಂದ್ಯ. ಅವರು ಈಗಾಗಲೇ ತಮ್ಮ ನಿವೃತ್ತಿ ಘೋಷಿಸಿದ್ದು, ಕಂಚಿನ ಪದಕದ ಗೆಲುವಿನೊಂದಿಗೆ ತಮ್ಮ ಹಾಕಿ ವೃತ್ತಿ ಬದುಕಿಗೆ ತೆರೆ ಎಳೆಯುವ ಕಾತರದಲ್ಲಿದ್ದಾರೆ. 2006ರಲ್ಲಿ ಪಾದಾರ್ಪಣೆ ಮಾಡಿದ್ದ ಶ್ರೀಜೇಶ್‌ ಈ ವರೆಗೂ ಭಾರತದ ಪರ 330ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.