ಪೋಲೋ ಕಪ್‌ ಕಾರ್‌ ರೇಸಿಂಗ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದ ಧೃವ್‌ ಚವಾಣ್‌

| Published : Aug 21 2024, 12:33 AM IST

ಪೋಲೋ ಕಪ್‌ ಕಾರ್‌ ರೇಸಿಂಗ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದ ಧೃವ್‌ ಚವಾಣ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ವಾರ ನಡೆದ ಪೋಲೋ ಕಪ್‌ ಕಾರ್‌ ರೇಸ್‌. ಒಟ್ಟು 10 ರೇಸ್‌ಗಳು ಇದ್ದವು. ಮೊದಲ ಸುತ್ತು ಜುಲೈ 19ರಿಂದ 21ರ ವರೆಗೂ, 2ನೇ ಸುತ್ತು ಆಗಸ್ಟ್‌ 16ರಿಂದ 18ರ ವರೆಗೂ ನಡೆಯಿತು.

ಚೆನ್ನೈ: ಪ್ರತಿಷ್ಠಿತ ಪೋಲೋ ಕಪ್‌ 2024ರ ಚಾಂಪಿಯನ್‌ ಆಗಿ ಮುಂಬೈನ ಧೃವ್‌ ಚವಾಣ್‌ ಹೊರಹೊಮ್ಮಿದ್ದಾರೆ. ಆದಿತ್ಯ ಚವಾಣ್‌ ವಿರುದ್ಧ ರೋಚಕ ಗೆಲುವು ಸಾಧಿಸಿ ಧೃವ್‌ ಚಾಂಪಿಯನ್‌ಶಿಪ್‌ ಜಯಿಸಿದರು.

ಕಳೆದ ವಾರಾಂತ್ಯದಲ್ಲಿ ನಡೆದ ರೇಸ್‌ ಭಾರೀ ರೋಚಕತೆಯಿಂದ ಕೂಡಿತ್ತು. ಅಂತಿಮ ಸುತ್ತಿಗೂ ಮುನ್ನ ಧೃವ್‌ ಹಾಗೂ ಆದಿತ್ಯ ನಡುವೆ ಕೇವಲ 1 ಅಂಕದ ಅಂತರವಿತ್ತು. ಆದರೆ ಅಂತಿಮ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಧೃವ್‌ (183 ಅಂಕಗಳು), ಒಟ್ಟಾರೆ 4 ಅಂಕಗಳ ಅಂತರದಲ್ಲಿ ಆದಿತ್ಯರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಓಜಸ್‌ ಸುರ್ವೆ 159 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು.

‘ನನ್ನ ಕನಸೀಗ ನನಸಾಗಿದೆ. ಗುರುವಾರ ನನ್ನ ಕಾರು ಪಲ್ಟಿ ಆಗಿ ಭಾರಿ ಆಘಾತ ಎದುರಾಗಿತ್ತು. ರೇಸ್‌ಗಳ ವೇಳೆ ನನ್ನ ತಂದೆ ಸಹ ಆಸ್ಪತ್ರೆಯಲ್ಲಿದ್ದರು. ಆದರೆ, ನಾನು ಛಲ ಬಿಡದೆ, ಗಮನ ಬೇರೆಡೆಗೆ ಜಾರದಂತೆ ಎಚ್ಚರವಹಿಸಿ ಪ್ರಶಸ್ತಿ ಜಯಿಸಿದೆ’ ಎಂದು ಹೇಳಿದರು.

ಈ ಋತುವು ಅಹಮದಾಬಾದ್‌ನಲ್ಲಿ ಚಾಲಕರ ಆಯ್ಕೆ ಪ್ರಕ್ರಿಯೆಯೊಂದಿಗೆ ಆರಂಭಗೊಂಡಿತ್ತು. ಈ ಪ್ರಕ್ರಿಯೆ ಬಹಳ ಅಚ್ಚುಕಟ್ಟಾಗಿ, ಸೂಕ್ಷ್ಮವಾಗಿ ನಡೆದಿತ್ತು. ದೆಹಲಿ, ಬೆಂಗಳೂರು, ಮುಂಬೈ ಹಾಗೂ ಚೆನ್ನೈಗಳಲ್ಲೂ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಭಾರತೀಯ ಮೋಟಾರ್‌ಸ್ಪೋರ್ಟ್ಸ್‌ನಲ್ಲಿ ಜನಪ್ರಿಯ ಹೆಸರುಗಳಾದ ಸೌರವ್‌ ಬಂಡೋಪಾದ್ಯಾಯ ಹಾಗೂ ರೇಯೊಮಂಡ್‌ ಬನಾಜಿ ಅವರ ಮಾರ್ಗದರ್ಶನದಲ್ಲಿ ರೇಸ್‌ನಲ್ಲಿ ಪಾಲ್ಗೊಂಡ ಚಾಲಕರ ಕೌಶಲ್ಯ ಹಾಗೂ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಯಿತು.

ಅತ್ಯುತ್ತಮ ಪ್ರದರ್ಶನ ನೀಡಿದ ಚಾಲಕನಿಗೆ ಈ ಋತುವಿನಲ್ಲಿ ಅಲ್ಪ ಪ್ರಮಾಣದ ಪ್ರಾಯೋಜಕತ್ವವನ್ನೂ ನೀಡಲಾಯಿತು.

ಪೋಲೋ ಕಪ್‌ನಲ್ಲಿ ಒಟ್ಟು 10 ಸುತ್ತುಗಳು ಇದ್ದವು. ಮೊದಲ ಸುತ್ತು ಜುಲೈ 19ರಿಂದ 21ರ ವರೆಗೂ, 2ನೇ ಸುತ್ತು ಆಗಸ್ಟ್‌ 16ರಿಂದ 18ರ ವರೆಗೂ ನಡೆಯಿತು.

ಈ ಸುತ್ತುಗಳಲ್ಲಿ ಅನುಭವಿ, ಯುವ ಹಾಗೂ ಉದಯೋನ್ಮುಖ ರೇಸ್‌ಗಳು ಪಾಲ್ಗೊಂಡರು. ಮದ್ರಾಸ್‌ ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ನಡೆದ ಮೊದಲ ಸುತ್ತಿನ ಮೊದಲ ರೇಸ್‌ನಲ್ಲಿ ಆದಿತ್ಯ ಪಟ್ನಾಯಕ್‌ ಜಯಗಳಿಸಿ ಲೀಡ್‌ ಪಡೆದರು. ಆದರೆ, 2ನೇ ರೇಸ್‌ನಲ್ಲಿ ಗೆದ್ದ ಧೃವ್‌ ಚವಾಣ್‌ ಸಮಬಲ ಸಾಧಿಸಿದರು.

ಬಾಂಗ್ಲಾದೇಶದ ಢಾಕಾದ ಅವಿಕ್‌ ಅನ್ವರ್‌ ಹಾಗೂ ರೋಮಿರ್‌ ಆರ್ಯ ಸಹ ಕೆಲ ರೇಸ್‌ಗಳಲ್ಲಿ ಪೋಡಿಯಂ ಫಿನಿಶ್‌ ಸಾಧಿಸಿದರು.

2ನೇ ಸುತ್ತಿನಲ್ಲಿ ರೇಸ್‌ನ ತೀಕ್ಷ್ಮಣೆ ಮತ್ತಷ್ಟು ಹೆಚ್ಚಿತು. ಆದಿತ್ಯ ಪಟ್ನಾಯಕ್‌ ಹಾಗೂ ಧೃವ್‌ ಚವಾಣ್‌ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟಿತು. ಕೊನೆಯ ರೇಸ್‌ ವರೆಗೂ ಇಬ್ಬರು ಚಾಂಪಿಯನ್‌ಶಿಪ್‌ಗಾಗಿ ಸೆಣಸಾಡಿದರು. ಧೃವ್‌ ಹಾಗೂ ಆದಿತ್ಯ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಗಳಿಸಿದರು.

ರೋಮಿರ್‌ ಆರ್ಯ ಈ ಋತುವಿನ ಉದಯೋನ್ಮುಖ ತಾರೆ ಪ್ರಶಸ್ತಿ ಪಡೆದರೆ, ಮುಂಜಲ್‌ ಸಾಲ್ವಾ ಮಾಸ್ಟರ್‌ ಚಾಂಪಿಯನ್‌ಶಿಪ್‌ ಜಯಿಸಿದರು.

2025ರ ಪೋಲೋ ಕಪ್‌ನಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಚಾಲಕರು, ಅಕ್ಟೋಬರ್‌ 5 ಹಾಗೂ 6 ರಂದು ಮುಂಬೈನಲ್ಲಿ ನಡೆಯಲಿರುವ ಆಯ್ಕೆ ಪ್ರಕ್ರಿಯೆಗೆ ನೋಂದಾಯಿಸಿಕೊಳ್ಳಬಹುದಾಗಿದೆ.