ಸಾರಾಂಶ
ಆರ್‌ಸಿಬಿ ತಂಡದಲ್ಲಿರುವ ಕಾರ್ತಿಕ್ ಈ ಆವೃತ್ತಿ ಬಳಿಕ ಐಪಿಎಲ್ ತೊರೆಯಲಿದ್ದಾರೆ. ಕಾರ್ತಿಕ್ 2008ರ ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಆಡುತ್ತಿದ್ದು, ಒಟ್ಟು 16 ಆವೃತ್ತಿಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ.
ಧರ್ಮಶಾಲಾ: ಭಾರತದ ತಾರಾ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರು 2024ರ ಆವೃತ್ತಿ ಬಳಿಕ ಐಪಿಎಲ್‌ನಿಂದ ನಿವೃತ್ತಿಯಾಗಲಿದ್ದಾರೆ. 38ರ ಕಾರ್ತಿಕ್ 2008ರ ಚೊಚ್ಚಲ ಆವೃತ್ತಿಯಿಂದಲೂ ಐಪಿಎಲ್ ಆಡುತ್ತಿದ್ದು, ಒಟ್ಟು 16 ಆವೃತ್ತಿಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ. ಸದ್ಯ ಆರ್‌ಸಿಬಿ ತಂಡದಲ್ಲಿರುವ ಕಾರ್ತಿಕ್ ಈ ಆವೃತ್ತಿ ಬಳಿಕ ಐಪಿಎಲ್ ತೊರೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ಬಗ್ಗೆಯೂ ಅವರು ಈ ಬಾರಿ ಐಪಿಎಲ್ ನಂತರ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ತಿಕ್ 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆ ಟಿ20 ಪಂದ್ಯ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧಾರಣ ದಾಖಲೆ ಹೊಂದಿರುವ ತಮಿಳುನಾಡು ಮೂಲದ ಕಾರ್ತಿಕ್, ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದ್ದರು.ಆಸ್ಟ್ರೇಲಿಯಾದಲ್ಲಿ ನಡೆದ 2022ರ ಟಿ20 ವಿಶ್ವಕಪ್‌ನಲ್ಲೂ ಆಡಿದ್ದ ಕಾರ್ತಿಕ್ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಬಳಿಕ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡಿದ್ದರು. 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಕಾರ್ತಿಕ್ 26 ಟೆಸ್ಟ್ ಆಡಿದ್ದು, 1025 ರನ್ ಗಳಿಸಿದ್ದಾರೆ. 94 ಏಕದಿನ ಪಂದ್ಯಗಳಲ್ಲಿ 1752 ರನ್, 60 ಟಿ20 ಪಂದ್ಯಗಳಿಂದ 686 ರನ್ ಕಲೆ ಹಾಕಿದ್ದಾರೆ.