ಒಲಿಂಪಿಕ್ಸ್‌ ಪದಕ ಸಿಗದ ನೋವಿನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್‌ ಫೋಗಟ್‌ !

| Published : Aug 09 2024, 12:32 AM IST / Updated: Aug 09 2024, 04:00 AM IST

ಸಾರಾಂಶ

ನೋವಿನ ವಿದಾಯ. ಒಲಿಂಪಿಕ್ಸ್‌ನಲ್ಲಿ ಪದಕ ಸಿಗದ ಬೇಸರದಲ್ಲಿ ನಿವೃತ್ತಿ ಘೋಷಣೆ. ಅಮ್ಮಾ, ನನ್ನಲ್ಲಿನ್ನು ಶಕ್ತಿ ಉಳಿದಿಲ್ಲ ಎಂದು ಭಾವುಕ ಪೋಸ್ಟ್‌. ನಿವೃತ್ತಿ ನಿರ್ಧಾರ ಹಿಂಪಡೆಯಲು ಒತ್ತಾಯ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಪದಕ ಗೆಲ್ಲುವ ಕಾತರದಲ್ಲಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್ ಫೋಗಟ್‌, ತಮ್ಮ ಕನಸು ಭಗ್ನಗೊಂಡ ಬೇಸರದಲ್ಲಿ ಕುಸ್ತಿ ವೃತ್ತಿ ಬದುಕಿಗೆ ನಿವೃತ್ತಿ ಪ್ರಕಟಿಸಿದ್ದಾರೆ.ಮಹಿಳೆಯರ 50 ಕೆ.ಜಿ. ವಿಭಾಗದ ಫೈನಲ್‌ಗೂ ಮುನ್ನ ತಮ್ಮ ತೂಕ ಜಾಸ್ತಿಯಿದ್ದ ಕಾರಣ ವಿನೇಶ್‌ ಒಲಿಂಪಿಕ್ಸ್‌ನಿಂದಲೇ ಅನರ್ಹಗೊಂಡಿದ್ದರು. 

ಗುರುವಾರ ಸಾಮಾಜಿಕ ತಾಣಗಳಲ್ಲಿ 29 ವರ್ಷದ ವಿನೇಶ್‌, ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. 2 ಬಾರಿ ವಿಶ್ವಚಾಂಪಿಯನ್‌ಶಿಪ್‌ ಕಂಚು, 2018ರ ಏಷ್ಯನ್‌ ಗೇಮ್ಸ್‌ ಹಾಗೂ 3 ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ವಿನೇಶ್‌ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಘಟಾನುಘಟಿಗಳನ್ನೇ ಮಣಿಸಿ ಫೈನಲ್‌ ಪ್ರವೇಶಿಸಿದ್ದ ಅವರು, ಪಂದ್ಯಕ್ಕೂ ಮುನ್ನ ತಮ್ಮ ದೇಹ ತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದರು. 

ತಾಯಿಗೆ ಕ್ಷಮೆ ಕೋರಿ ಭಾವನಾತ್ಮಕ ಪೋಸ್ಟ್‌

ವಿನೇಶ್‌ ತಮ್ಮ ತಾಯಿಗೆ ಒಂದು ಭಾವನಾತ್ಮಕ ಪತ್ರ ಬರೆದು ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಅಮ್ಮಾ, ಕುಸ್ತಿ ಗೆದ್ದಿದೆ, ನಾನು ಸೋತಿದ್ದೇನೆ. ನನ್ನನ್ನು ಕ್ಷಮಿಸಿ. ನಿಮ್ಮ ಕನಸು ಮತ್ತು ನನ್ನ ಧೈರ್ಯ. ಎಲ್ಲವೂ ನುಚ್ಚುನೂರಾಗಿದೆ. ನನ್ನಲ್ಲಿನ್ನು ಶಕ್ತಿ ಉಳಿದಿಲ್ಲ. 2001ರಿಂದ 2024ರ ವರೆಗಿನ ಕುಸ್ತಿಗೆ ಗುಡ್‌ಬೈ. ನಾನು ನಿಮಗೆ ಯಾವತ್ತೂ ಋಣಿಯಾಗಿರುತ್ತೇನೆ. ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.

ನಿವೃತ್ತಿ ಹಿಂಪಡೆಯಲು ಒತ್ತಾಯ

ತಮ್ಮ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ವಿನೇಶ್‌ ಫೋಗಟ್‌ಗೆ ಭಾರತ ಕುಸ್ತಿ ಫೆಡರೇಷನ್‌(ಡಬ್ಲ್ಯುಎಫ್‌ಐ) ಅಧ್ಯಕ್ಷ ಸಂಜಯ್‌ ಸಿಂಗ್‌ ಮನವಿ ಮಾಡಿದ್ದಾರೆ. ‘ವಿನೇಶ್‌ರ ನಿರ್ಧಾರದಿಂದ ಆಘಾತಗೊಂಡಿದ್ದೇನೆ. ದುಃಖದ ಸಮಯದಲ್ಲಿ ತೆಗೆದ ನಿರ್ಧಾರದಿಂದ ಹಿಂದೆ ಸರಿಯುವಂತೆ ಡಬ್ಲ್ಯುಎಫ್‌ಐ ಪರವಾಗಿ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ. ಇನ್ನು, ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನ ವಿಜೇತ ಕುಸ್ತಿಪಟು, ವಿನೇಶ್‌ರ ಸಹೋದರಿ ಬಬಿತಾ ಫೋಗಟ್‌ ಕೂಡಾ ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದಾರೆ.