ಸಾರಾಂಶ
ಅನಂತಪುರ: ಇಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ‘ಬಿ’ ತಂಡದ ವಿರುದ್ಧ ಭಾರತ ‘ಡಿ’ ತಂಡ ದೊಡ್ಡ ಮುನ್ನಡೆ ಸಾಧಿಸಿದೆ. 3ನೇ ದಿನದಂತ್ಯಕ್ಕೆ ತಂಡ 5 ವಿಕೆಟ್ ಕಳೆದುಕೊಂಡು 244 ರನ್ ಕಲೆಹಾಕಿದೆ.
ಒಟ್ಟು 311 ರನ್‌ಗಳ ಲೀಡ್ ಪಡೆದಿರುವ ತಂಡ, ಗೆಲುವಿನ ಕಾತರದಲ್ಲಿದೆ. ಭಾನುವಾರ ಪಂದ್ಯದ ಕೊನೆ ದಿನ.2ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿದ್ದ ಬಿ ತಂಡಕ್ಕೆ ಶನಿವಾರ ವಾಷಿಂಗ್ಟನ್ ಸುಂದರ್ ಆಸರೆಯಾದರು. 7ನೇ ವಿಕೆಟ್‌ಗೆ ರಾಹುಲ್ ಚಹರ್(9) ಜೊತೆಗೂಡಿ 40 ರನ್ ಸೇರಿಸಿದರು.
ಇತರ ಬ್ಯಾಟರ್‌ಗಳು ಕೈಕೊಟ್ಟರೂ ಏಕಾಂಗಿ ಹೋರಾಟ ನಡೆಸಿದ ವಾಷಿಂಗ್ಟನ್ 87 ರನ್ ಸಿಡಿಸಿದರು. ತಂಡ 282ಕ್ಕೆ ಆಲೌಟಾಯಿತು. ಸೌರಭ್ ಕುಮಾರ್ 5 ವಿಕೆಟ್ ಕಿತ್ತರು.ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 67 ರನ್ ಮುನ್ನಡೆ ಸಾಧಿಸಿದ ಡಿ ತಂಡ 2ನೇ ಇನ್ನಿಂಗ್ಸ್‌ನಲ್ಲೂ ಎದುರಾಳಿ ಮೇಲೆ ಪ್ರಾಬಲ್ಯ ಸಾಧಿಸಿತು. 18 ರನ್‌ಗೆ 3 ವಿಕೆಟ್ ಕಳೆದುಕೊಂಡ ಬಳಿಕ ನಾಯಕ ಶ್ರೇಯಸ್ ಅಯ್ಯರ್ 40 ಎಸೆತಗಳಲ್ಲಿ 50, ಸಂಜು ಸ್ಯಾಮ್ಸನ್ 53 ಎಸೆತಗಳಲ್ಲಿ 45 ರನ್ ಸಿಡಿಸಿದರು.
ಮತ್ತೊಂದೆಡೆ ರಿಕ್ಕಿ ಭುಯಿ ಅಬ್ಬರದ ಆಟವಾಡುತ್ತಿದ್ದು, 87 ಎಸೆತಗಳಲ್ಲಿ ಔಟಾಗದೆ 90 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುಕೇಶ್ ಕುಮಾರ್ 3, ನವ್‌ದೀಪ್ ಸೈನಿ 2 ವಿಕೆಟ್ ಕಿತ್ತರು.