ದುಲೀಪ್‌ ಟ್ರೋಫಿಯ ಭಾರತ ‘ಎ’-ಭಾರತ ‘ಬಿ’ ಪಂದ್ಯಕ್ಕೆ ಬೆಂಗಳೂರು ಆತಿಥ್ಯ. ಭಾರತ ‘ಸಿ’-ಭಾರತ ‘ಡಿ’ ಪಂದ್ಯ ಅನಂತಪುರದಲ್ಲಿ ಆಯೋಜನೆ. ತಾರಾ ಆಟಗಾರರು ಕಣಕ್ಕೆ.

ಬೆಂಗಳೂರು: 2024-25ರ ದೇಸಿ ಕ್ರಿಕೆಟ್‌ ಋತುವಿಗೆ ಗುರುವಾರ ದುಲೀಪ್‌ ಟ್ರೋಫಿ ಪ್ರಥಮ ದರ್ಜೆ ಟೂರ್ನಿಯ ಆರಂಭದೊಂದಿಗೆ ಚಾಲನೆ ದೊರೆಯಲಿದೆ. ಟೂರ್ನಿಯಲ್ಲಿ 4 ತಂಡಗಳು ಸೆಣಸಲಿದ್ದು, ಮೊದಲ ಸುತ್ತಿನ ಪಂದ್ಯಗಳು ಗುರುವಾರ ಆರಂಭಗೊಳ್ಳಲಿವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ‘ಎ’ ಹಾಗೂ ಭಾರತ ‘ಬಿ’ ತಂಡಗಳು ಸೆಣಸಲಿದ್ದು, ಭಾರತ ‘ಸಿ’ ಹಾಗೂ ಭಾರತ ‘ಡಿ’ ತಂಡಗಳ ನಡುವಿನ ಪಂದ್ಯಕ್ಕೆ ಅನಂತಪುರ ಆತಿಥ್ಯ ವಹಿಸಲಿದೆ.

ಶುಭ್‌ಮನ್‌ ಗಿಲ್‌, ಯಶಸ್ವಿ ಜೈಸ್ವಾಲ್‌, ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಕುಲ್ದೀಪ್‌ ಯಾದವ್‌ ಸೇರಿ ಅನೇಕ ತಾರಾ ಆಟಗಾರರು ಕಣಕ್ಕಿಳಿಯಲಿದ್ದಾರೆ. ಆದರೆ ಇಶಾನ್‌ ಕಿಶನ್‌, ಪ್ರಸಿದ್ಧ್‌ ಕೃಷ್ಣ ಮೊದಲ ಸುತ್ತಿನ ಪಂದ್ಯಕ್ಕೆ ಗೈರಾಗುವುದು ಬಹುತೇಕ ಖಚಿತವೆನಿಸಿದೆ.

ಭಾರತ ‘ಎ’ ತಂಡವನ್ನು ಶುಭ್‌ಗಿಲ್‌ ಮುನ್ನಡೆಸಲಿದ್ದು, ‘ಬಿ’ ತಂಡಕ್ಕೆ ಅಭಿಮನ್ಯು ಈಶ್ವರನ್‌ ನಾಯಕರಾಗಿರಲಿದ್ದಾರೆ. ಭಾರತ ‘ಸಿ’ ತಂಡವನ್ನು ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸಲಿದ್ದು, ‘ಡಿ’ ತಂಡ ಶ್ರೇಯಸ್‌ ಅಯ್ಯರ್‌ರ ನಾಯಕತ್ವದಲ್ಲಿ ಆಡಲಿದೆ.