ಟಿ20 ವಿಶ್ವಕಪ್‌ಗೆ ಇನ್ನು ಕೇವಲ 2 ವಾರ ಬಾಕಿ ಇದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಭಾರತ ಸತತ 9ನೇ ದ್ವಿಪಕ್ಷೀಯ ಟಿ20 ಸರಣಿ ಗೆಲುವಿನ ಮೂಲಕ ತನ್ನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ.
ಗುವಾಹಟಿ: ಟಿ20 ವಿಶ್ವಕಪ್‌ಗೆ ಇನ್ನು ಕೇವಲ 2 ವಾರ ಬಾಕಿ ಇದ್ದು, ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿರುವ ಭಾರತ ಸತತ 9ನೇ ದ್ವಿಪಕ್ಷೀಯ ಟಿ20 ಸರಣಿ ಗೆಲುವಿನ ಮೂಲಕ ತನ್ನ ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡಿದೆ.
ಭಾನುವಾರ ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಪಡೆದು ಸರಣಿ ವಶಪಡಿಸಿಕೊಂಡಿತು. ಭಾರತದ ಸಂಘಟಿತ ಹೋರಾಟದ ಎದುರು ಕಿವೀಸ್ ಥಂಡಾ ಹೊಡೆಯಿತು.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್‌ಗೆ ಭಾರತೀಯ ಬೌಲರ್‌ಗಳು ಕಡಿವಾಣ ಹಾಕಿದರು. 34ಕ್ಕೆ 3 ವಿಕೆಟ್ ಕಳೆದುಕೊಂಡ ಕಿವೀಸ್ ಆ ಬಳಿಕ ಯಾವ ಹಂತದಲ್ಲೂ ಪುಟಿದೇಳಲು ಸಾಧ್ಯವಾಗಲಿಲ್ಲ. ಬೂಮ್ರಾ 3, ಹಾರ್ದಿಕ್ ಹಾಗೂ ಬಿಷ್ಣೋಯಿ ತಲಾ 2 ವಿಕೆಟ್ ಕಿತ್ತರು.
ಸುಲಭ ಗುರಿ ಬೆನ್ನತ್ತಿದ ಭಾರತ ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿತು. ಆದರೆ ಭಾರತೀಯರ ಆರ್ಭಟವನ್ನು ತಡೆಯಲು ಕಿವೀಸ್ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇಶಾನ್ ಕಿಶನ್ (28) ಹಾಗೂ ಅಭಿಷೇಕ್ ಶರ್ಮಾ ಕೇವಲ 19 ಎಸೆತದಲ್ಲಿ ತಂಡದ ಮೊತ್ತವನ್ನು 50 ರನ್ ದಾಟಿಸಿದರು. ಕಿಶನ್ ಔಟಾದ ಬಳಿಕ ಅಭಿಷೇಕ್‌ಗೆ ನಾಯಕ ಸೂರ್ಯಕುಮಾರ್ ಜೊತೆಯಾದರು.
ಕೇವಲ 14 ಎಸೆತದಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ತಮ್ಮ 20 ಎಸೆತಗಳ ಇನ್ನಿಂಗ್ಸಲ್ಲಿ 7 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ ಔಟಾಗದೆ 68, ಸೂರ್ಯ 26 ಎಸೆತದಲ್ಲಿ 6 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 57 ರನ್ ಚಚ್ಚಿದರು. ಕೇವಲ 10 ಓವರಲ್ಲೇ ಭಾರತ ಗೆಲುವು ಸಾಧಿಸಿ, ಸರಣಿ ತನ್ನದಾಗಿಸಿಕೊಂಡಿತು.
ಸ್ಕೋರ್: ನ್ಯೂಜಿಲೆಂಡ್ 20 ಓವರಲ್ಲಿ 153/9 (ಫಿಲಿಪ್ಸ್ 48, ಚಾಪ್ಮನ್ 32, ಬೂಮ್ರಾ 3-17), ಭಾರತ 10 ಓವರಲ್ಲಿ 155/2 (ಅಭಿಷೇಕ್ 68*, ಸೂರ್ಯ 57*, ಕಿಶನ್ 28, ಹೆನ್ರಿ 1-28) ಪಂದ್ಯಶ್ರೇಷ್ಠ: ಅಭಿಷೇಕ್
ಭಾರತ ಪರ 2ನೇ ಅತಿವೇಗದಅರ್ಧಶತಕ ಬಾರಿಸಿದ ಅಭಿಷೇಕ್
ಅಭಿಷೇಕ್ ಶರ್ಮಾ ಕೇವಲ 14 ಎಸೆತದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತ ಪರ ಟಿ20ಯಲ್ಲಿ 2ನೇ ಅತಿವೇಗದ ಫಿಫ್ಟಿ ದಾಖಲಿಸಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ 12 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದು ಈಗಲೂ ದಾಖಲೆಯಾಗಿ ಉಳಿದಿದೆ.
ಭಾರತಕ್ಕೆ ಅತಿದೊಡ್ಡ ಜಯ!
ಎಸೆತಗಳು ಬಾಕಿ ಇದ್ದ ಆಧಾರದಲ್ಲಿ ಟಿ20ಯಲ್ಲಿ ಇದು ಭಾರತಕ್ಕೆ ಅತಿದೊಡ್ಡ ಜಯ. 60 ಎಸೆತ ಬಾಕಿ ಉಳಿಸಿಕೊಂಡು ಭಾರತ ಜಯ ಸಾಧಿಸಿತು. ಈ ಮೊದಲು 2024ರಲ್ಲಿ ಬಾಂಗ್ಲಾದೇಶ ವಿರುದ್ಧ 49 ಎಸೆತ ಬಾಕಿ ಉಳಿಸಿಕೊಂಡು ಗೆದ್ದಿದ್ದು, ಅತಿದೊಡ್ಡ ಜಯ ಎನಿಸಿತ್ತು.
