ಸಾರಾಂಶ
ಬೆಂಗಳೂರು : 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಗೆ ಭಾರೀ ಟೀಕೆ ವ್ಯಕ್ತವಾಗಿದೆ.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದಾಗಿ 11 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಪ್ರವೇಶ ಅವಕಾಶವನ್ನು ಪೊಲೀಸ್ ಇಲಾಖೆ ನಿರಾಕರಿಸಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವುದಾಗಿ ಶುಕ್ರವಾರ ಕೆಎಸ್‌ಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿತ್ತು. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಐಪಿಎಲ್‌ಗೆ ಆಯ್ಕೆಯಾಗಲು ವೇದಿಕೆಯಂತೆ ಇರುವ ಈ ಟೂರ್ನಿಯನ್ನು ಕೆಎಸ್‌ಸಿಎ ಎಷ್ಟು ಸಾಧ್ಯವೋ ಅಷ್ಟು ಹಾಳು ಮಾಡುತ್ತಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟರಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಟೂರ್ನಿಯನ್ನು ಮೈಸೂರು, ಹುಬ್ಬಳ್ಳಿಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣಗಳಲ್ಲಿ ನಡೆಸಬಹುದಿತ್ತು. ಆ ನಗರಗಳಲ್ಲಿರುವ ಅಭಿಮಾನಿಗಳಿಗೆ ತಾರಾ ಆಟಗಾರರ ಆಟವನ್ನು ನೋಡುವ ಅವಕಾಶ ಸಿಗುತ್ತಿತ್ತು. ಟೂರ್ನಿಯೂ ಕಳೆಗಟ್ಟುತ್ತಿತ್ತು’ ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ. ಆ.11ರಿಂದ ಟೂರ್ನಿ ಆರಂಭಗೊಳ್ಳಲಿದ್ದು, ಜು.15ಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.