ಸಾರಾಂಶ
ಪ್ಯಾರಿಸ್: ಚೊಚ್ಚಲ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸ್ಪೇನ್‌ನ ಯುವ ತಾರೆ ಕಾರ್ಲೊಸ್ ಆಲ್ಕರಜ್ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ, ಇಟಲಿಯನ ಯಾನ್ನಿಕ್ ಸಿನ್ನರ್ ವಿರುದ್ಧ 21ರ ಆಲ್ಕರಜ್ 2-6, 6-3, 3-6, 6-4, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, 22ರ ಸಿನ್ನರ್‌ರ ಚೊಚ್ಚಲ ಫ್ರೆಂಚ್ ಓಪನ್ ಫೈನಲ್ ಕನಸು ಭಗ್ನಗೊಂಡಿತು. 2022ರಲ್ಲಿ ಯುಎಸ್ ಓಪನ್, ಕಳೆದ ವರ್ಷ ವಿಂಬಲ್ಡನ್ ಗೆದ್ದಿರುವ ಆಲ್ಕರಜ್ ಚೊಚ್ಚಲ ಬಾರಿ ಫ್ರೆಂಚ್ ಓಪನ್ ಫೈನಲ್‌ಗೆ ಇಟ್ಟಿದ್ದು, ಟ್ರೋಫಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ. ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.
ಇಗಾ vs ಪೌಲಿನಿ ಫೈನಲ್ ಇಂದು
ಪ್ಯಾರಿಸ್: ಫ್ರೆಂಚ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್ ಶನಿವಾರ ನಡೆಯಲಿದ್ದು, ಪ್ರಶಸ್ತಿಗಾಗಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಹಾಗೂ 12ನೇ ಶ್ರೇಯಾಂಕಿತೆ ಇಟಲಿಯ ಜ್ಯಾಸ್ಮಿಸ್ ಪೌಲಿನಿ ಸೆಣಸಲಿದ್ದಾರೆ. ಸತತ 3ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಇಗಾ 4ನೇ ಫ್ರೆಂಚ್ ಓಪನ್, ಒಟ್ಟಾರೆ 5ನೇ ಗ್ರ್ಯಾನ್ ಸ್ಲಾಂ ಗೆಲ್ಲುವ ಗುರಿ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಂ ಫೈನಲ್‌ಗೇರಿರುವ ಪೌಲಿನಿ, ಚೊಚ್ಚಲ ಪ್ರಯತ್ನದಲ್ಲೇ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. 20ರಲ್ಲಿ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದ ಇಗಾ, 2022ರಲ್ಲಿ ಯುಎಸ್ ಓಪನ್ ಟ್ರೋಫಿ ಜಯಿಸಿದ್ದರು.