ಸಾರಾಂಶ
ಪ್ಯಾರಿಸ್: ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾನುವಾರ, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.
ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಇಬ್ಬರೂ ಫೈನಲ್ ಪ್ರವೇಶಿಸಿದ್ದು, ಜ್ವೆರೆವ್ ಚೊಚ್ಚಲ ಹಾಗೂ ಆಲ್ಕರಜ್ 3ನೇ ಗ್ರ್ಯಾನ್ ಸ್ಲಾಂ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಆಲ್ಕರಜ್, ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರೆ, ನಾರ್ವೆಯ ಕ್ಯಾಸ್ಪರ್ ರುಡ್ ವಿರುದ್ಧ ಜ್ವೆರೆವ್ 2-6, 6-2, 6-4, 6-2 ಸೆಟ್‌ಗಳಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 2020ರಲ್ಲಿ ಯುಎಸ್ ಓಪನ್ ಫೈನಲ್‌ಗೇರಿದ್ದ ಜ್ವೆರೆವ್‌ರ ಪ್ರಶಸ್ತಿ ಕನಸು ಈಡೇರಿರಲಿಲ್ಲ. ಇನ್ನು ಆಲ್ಕರಜ್ 2022ರಲ್ಲಿ ಯುಎಸ್ ಓಪನ್, 2023ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದರು.
ಪ್ರೊ ಲೀಗ್: ಭಾರತ ವನಿತಾ ತಂಡಕ್ಕೆ ಸತತ 7ನೇ ಸೋಲು
ಲಂಡನ್: 2023-24 ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಸತತ 7ನೇ ಸೋಲನುಭವಿಸಿದೆ. ಶನಿವಾರ ಜರ್ಮನಿ ವಿರುದ್ಧ 2-4 ಗೋಲುಗಳಿಂದ ಸೋಲು ಎದುರಾಯಿತು. ಇದರೊಂದಿಗೆ ಭಾರತ ತಂಡ ಆಡಿರುವ 15 ಪಂದ್ಯಗಳಲ್ಲಿ 2 ಗೆಲುವಿನೊಂದಿಗೆ 8 ಅಂಕ ಸಂಪಾದಿಸಿ ಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಪಂದ್ಯದಲ್ಲಿ ಸುನೆಲಿತಾ(9ನೇ ನಿಮಿಷ), ದೀಪಿಕಾ(15ನೇ ನಿ.) ಗೋಲು ಬಾರಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರೂ, ಬಳಿಕ 4 ಗೋಲು ಬಿಟ್ಟುಕೊಟ್ಟು ಪಂದ್ಯ ಕೈಚೆಲ್ಲಿತು. ಭಾರತ ಲೀಗ್‌ನ ಕೊನೆ ಪಂದ್ಯದಲ್ಲಿ ಭಾನುವಾರ ಬ್ರಿಟನ್ ವಿರುದ್ಧ ಸೆಣಸಾಡಲಿದೆ.