ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ವಿಶೇಷ.: ಪ್ರಧಾನಿ ಮೋದಿ ಶ್ಲಾಘನೆ

| Published : Jul 29 2024, 12:53 AM IST / Updated: Jul 29 2024, 04:03 AM IST

ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ವಿಶೇಷ.: ಪ್ರಧಾನಿ ಮೋದಿ ಶ್ಲಾಘನೆ
Share this Article
  • FB
  • TW
  • Linkdin
  • Email

ಸಾರಾಂಶ

ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ಇನ್ನೂ ವಿಶೇಷ. ಇದು ಅದ್ಭುತ ಸಾಧನೆ’ ಎಂದ ಮೋದಿ. ರಾಷ್ಟ್ರಪತಿ ಮುರ್ಮು ಸೇರಿ ಗಣ್ಯರಿಂದ ಅಭಿನಂದನೆ.

ನವದೆಹಲಿ: ಒಲಿಂಪಿಕ್ಸ್‌ ಪದಕ ಗೆದ್ದ ಶೂಟರ್‌ ಮನು ಭಾಕರ್‌ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ‘ಐತಿಹಾಸಿಕ ಪದಕ. ವೆಲ್‌ಡನ್‌ ಮನು ಭಾಕರ್‌. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ನಿಮಗೆ ಅಭಿನಂದನೆಗಳು. 

ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಸಾಧನೆ ಇನ್ನೂ ವಿಶೇಷ. ಇದು ಅದ್ಭುತ ಸಾಧನೆ’ ಎಂದಿದ್ದಾರೆ. ಇದೇ ವೇಳೆ ಮುರ್ಮು ಅವರು, ‘ಮನು ಸಾಧನೆ ದೇಶದ ಕ್ರೀಡಾಪಟುಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿ. ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ’ ಎಂದು ಹಾರೈಸಿದ್ದಾರೆ. ಇನ್ನು, ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ, ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, 2008ರ ಒಲಿಂಪಿಕ್ಸ್‌ ಚಿನ್ನ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ, ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಸದಸ್ಯೆ ನೀತಾ ಅಂಬಾನಿ, ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಗೌತಮ್‌ ಗಂಭೀರ್‌ ಸೇರಿದಂತೆ ಹಲವರು ಮನು ಸಾಧನೆಯನ್ನು ಶ್ಲಾಘಿಸಿದ್ದಾರೆ.

ಶೂಟಿಂಗ್‌: ಇಂದು ಭಾರತಕ್ಕೆ ಮತ್ತೆ ಎರಡು ಪದಕ ನಿರೀಕ್ಷೆ

ಭಾರತದ ಶೂಟರ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಲಯ ಕಂಡುಕೊಂಡಿದ್ದು, ಸೋಮವಾರ ಮತ್ತೆರಡು ಪದಕಗಳ ನಿರೀಕ್ಷೆ ಮೂಡಿಸಿದ್ದಾರೆ. 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಒಟ್ಟಿಗೆ ಸ್ಪರ್ಧಿಸಿ ಫೈನಲ್‌ಗೇರಲು ವಿಫಲರಾಗಿದ್ದ ರಮಿತಾ ಜಿಂದಾಲ್‌ ಹಾಗೂ ಅರ್ಜುನ್‌ ಬಬುತಾ, ವೈಯಕ್ತಿಕ ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಸೋಮವಾರ ಎರಡೂ ಸ್ಪರ್ಧೆಗಳ ಫೈನಲ್‌ಗಳು ನಡೆಯಲಿವೆ.ಭಾನುವಾರ ಪುರುಷರ ವಿಭಾಗದ ಅರ್ಹತಾ ಸುತ್ತಿನಲ್ಲಿ ಅರ್ಜುನ್‌ 630.1 ಅಂಕಗಳನ್ನು ಪಡೆದು 7ನೇ ಸ್ಥಾನಿಯಾದರು. ಆದರೆ ಸಂದೀಪ್‌ ಸಿಂಗ್‌ 629.3 ಅಂಕಗಳೊಂದಿಗೆ 12ನೇ ಸ್ಥಾನ ಪಡೆದು ಸ್ಪರ್ಧೆಯಿಂದ ನಿರ್ಗಮಿಸಿದರು.

ಇನ್ನು, ಮಹಿಳಾ ವಿಭಾಗದ ಅರ್ಹತಾ ಸುತ್ತಿನಲ್ಲಿ ರಮಿತಾ 631.5 ಅಂಕಗಳನ್ನು ಸಂಪಾದಿಸಿ 5ನೇ ಸ್ಥಾನ ಪಡೆದು ಫೈನಲ್‌ ಸ್ಥಾನ ಖಚಿತಪಡಿಸಿಕೊಂಡರು. ಆದರೆ ಭಾರತದ ಮತ್ತೋರ್ವ ಸ್ಪರ್ಧಿ ಇಳವೆನಿಲ್‌ ವಳರಿವನ್‌ 630.7 ಅಂಕಗಳೊಂದಿಗೆ 10ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು. ಅಗ್ರ-8 ಸ್ಪರ್ಧಿಗಳು ಫೈನಲ್‌ಗೇರಿದರು.