ಲಂಕಾ ವಿರುದ್ಧ ಸರಣಿಗೆ ತಯಾರಿ: ಹೊಸ ಕೋಚ್‌ ಗಂಭೀರ್‌ ಮಾರ್ಗದರ್ಶನದಲ್ಲಿ ಭಾರತ ಅಭ್ಯಾಸ ಶುರು

| Published : Jul 24 2024, 12:21 AM IST / Updated: Jul 24 2024, 04:17 AM IST

ಸಾರಾಂಶ

ಲಂಕಾ ವಿರುದ್ಧ ಸರಣಿಗೆ ತಯಾರಿ. ಆಟಗಾರರ ಜೊತೆ ಗಂಭೀರ್‌ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ.

ಪಲ್ಲೆಕೆಲೆ: ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ತಂಡದ ಆಟಗಾರರು ಮಂಗಳವಾರ ನೂತನ ಕೋಚ್‌ ಗೌತಮ್‌ ಗಂಭೀರ್‌ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸೋಮವಾರ ಲಂಕಾಕ್ಕೆ ಬಂದಿಳಿದ ಆಟಗಾರರು ಮಂಗಳವಾರ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಕೆಲ ಕಾಲ ತಯಾರಿ ನಡೆಸಿದರು. 

ಆಟಗಾರರ ಜೊತೆ ಗಂಭೀರ್‌ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದೆ. ನಾಯಕ ಸೂರ್ಯಕುಮಾರ್‌, ಶುಭ್‌ಮನ್ ಗಿಲ್‌, ಸಿರಾಜ್‌, ಸಂಜು ಸ್ಯಾಮ್ಸನ್‌ ಅವರನ್ನೊಳಗೊಂಡ ಆಟಗಾರರ ತಂಡ ಕೆಲ ಕಾಲ ನೆಟ್ಸ್‌ ಅಭ್ಯಾಸ ನಡೆಸಿತು. ಸರಣಿಯ ಮೊದಲ ಪಂದ್ಯ ಜುಲೈ 27ರಂದು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶ್ರೀಲಂಕಾ ತಂಡಕ್ಕೆ ಅಸಲಂಕ ನಾಯಕ

ಪಲ್ಲೆಕೆಲೆ: ಜು.27ರಿಂದ ಆರಂಭಗೊಳ್ಳಲಿರುವ ಭಾರತ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಮಂಗಳವಾರ ಶ್ರೀಲಂಕಾ ತಂಡ ಪ್ರಕಟಿಸಲಾಗಿದ್ದು, ಚರಿತ್‌ ಅಸಲಂಕ ನಾಯಕನಾಗಿ ನೇಮಕಗೊಂಡಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಆಲ್ರೌಂಡರ್ ವಾನಿಂಡು ಹಸರಂಗ ಲಂಕಾಕ್ಕೆ ನಾಯಕತ್ವ ವಹಿಸಿದ್ದರು. 

ಆದರೆ ತಂಡ ಗುಂಪು ಹಂತದಲ್ಲೇ ಹೊರಬಿದ್ದ ಕಾರಣ ಅವರು ನಾಯಕತ್ವ ತ್ಯಜಿಸಿದ್ದರು. ಇತ್ತೀಚೆಗಷ್ಟೇ ಲಂಕಾ ಪ್ರೀಮಿಯರ್‌ ಲೀಗ್‌ನಲ್ಲಿ ಅಸಲಂಕ ನಾಯಕತ್ವದಲ್ಲೇ ಜಾಫ್ನಾ ಕಿಂಗ್ಸ್‌ ಚಾಂಪಿಯನ್‌ ಆಗಿತ್ತು. 

ಇನ್ನು, 16 ಸದಸ್ಯರ ತಂಡದಿಂದ ಏಂಜೆಲೋ ಮ್ಯಾಥ್ಯೂಸ್‌ ಸ್ಥಾನ ಪಡೆದಿಲ್ಲ. ಹಸರಂಗ, ತೀಕ್ಷಣ, ಪತಿರನ, ಕುಸಾಲ್‌ ಮೆಂಡಿಸ್, ದಸುನ್‌ ಶಾನಕ, ಪಥುಂ ನಿಸ್ಸಾಂಕ ತಂಡದಲ್ಲಿದ್ದಾರೆ. 3 ಪಂದ್ಯಗಳು ಕ್ರಮವಾಗಿ ಜು.27, 28 ಹಾಗೂ 30ರಂದು ನಡೆಯಲಿವೆ.