ಭಾರತ ತಂಡದ ಆಟಗಾರ ಕೊಹ್ಲಿಯ ಅಟೋಗ್ರಾಫ್‌ ಕೊಡಿಸಲು ಆಸ್ಟ್ರೇಲಿಯಾ ಪ್ರಧಾನಿಗೆ ವೈದ್ಯ ಮನವಿ!

| Published : Dec 03 2024, 12:31 AM IST / Updated: Dec 03 2024, 05:47 AM IST

ಸಾರಾಂಶ

ಇತ್ತೀಚೆಗಷ್ಟೇ ಕೊಹ್ಲಿ ಸೇರಿ ಭಾರತ ತಂಡದ ಆಟಗಾರರನ್ನು ಆಲ್ಬನೀಸ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನನ್ನ ವೈಯಕ್ತಿಕ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಅವರು ಹೇಳಿದ್ದಾರೆ.

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಅಟೋಗ್ರಾಫ್‌ ಕೊಡಿಸುವಂತೆ ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನೀಸ್‌ಗೆ ಅವರ ವೈದ್ಯರು ಹೇಳಿದ್ದರಂತೆ. ಇದನ್ನು ಸ್ವತಃ ಆಲ್ಬನೀಸ್‌ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸ್ಟಾರ್‌ಸ್ಪೋರ್ಟ್ಸ್‌ ಜೊತೆ ಮಾತನಾಡಿರುವ ಆಲ್ಬನೀಸ್‌, ‘ನನ್ನ ವೈಯಕ್ತಿಕ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. 

ಅವರು ಕೊಹ್ಲಿಯ ಬಗ್ಗೆ ಎಷ್ಟು ಭಾವೋದ್ರಿಕ್ತರಾಗಿದ್ದಾರೆ ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೊಹ್ಲಿಯ ಅಟೋಗ್ರಾಫ್‌ ಕೊಡಿಸಲು ಅವರು ನನ್ನಲ್ಲಿ ಹೇಳಿದ್ದಾರೆ’ ಎಂದು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿ ಸೇರಿ ಭಾರತ ತಂಡದ ಆಟಗಾರರನ್ನು ಆಲ್ಬನೀಸ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕೋಚ್‌ ಗೌತಂ ಗಂಭೀರ್‌ ಆಸ್ಟ್ರೇಲಿಯಾಕ್ಕೆ ವಾಪಸ್‌

ಪರ್ತ್‌: ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಎದುರಾದ ಕಾರಣ ತವರಿಗೆ ಹಿಂದಿರುಗಿದ್ದ ಟೀಂ ಇಂಡಿಯಾದ ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌, ಆಸ್ಟ್ರೇಲಿಯಾಕ್ಕೆ ವಾಪಸಾಗಿದ್ದಾರೆ. ಗಂಭೀರ್‌ ಮೊದಲ ಟೆಸ್ಟ್‌ ಬಳಿಕ ಭಾರತಕ್ಕೆ ಮರಳಿದ್ದರು. ಹೀಗಾಗಿ ಕ್ಯಾನ್ಬೆರಾದಲ್ಲಿ ನಡೆದ ಭಾರತ ತಂಡ ಹಾಗೂ ಪ್ರಧಾನ ಮಂತ್ರಿ XI ತಂಡದ ವಿರುದ್ಧದ ಅಭ್ಯಾಸ ಪಂದ್ಯ ತಪ್ಪಿಸಿಕೊಂಡಿದ್ದರು. ಮಂಗಳವಾರ ಅವರು ಅಡಿಲೇಡ್‌ನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ. 2ನೇ ಟೆಸ್ಟ್‌ ಹಗಲು-ರಾತ್ರಿ ಮಾದರಿಯಲ್ಲಿ ನಡೆಯಲಿದ್ದು, ಅಡಿಲೇಡ್‌ ಆತಿಥ್ಯ ವಹಿಸಲಿದೆ.