ರಣಜಿ ಟ್ರೋಫಿ: ಕರ್ನಾಟಕದ ವೇಗಕ್ಕೆ ನಲುಗಿದ ಪಂಜಾಬ್‌! ಮೊದಲ ಇನ್ನಿಂಗ್ಸ್‌ ಕೇವಲ 55ಕ್ಕೆ ಆಲೌಟ್‌

| Published : Jan 24 2025, 12:48 AM IST / Updated: Jan 24 2025, 04:11 AM IST

ಸಾರಾಂಶ

ಪಂಜಾಬ್‌ ಮೊದಲ ಇನ್ನಿಂಗ್ಸ್‌ ಕೇವಲ 55ಕ್ಕೆ ಆಲೌಟ್‌. ವೇಗಿಗಳ ಪಾಲಾದ ಎಲ್ಲಾ 10 ವಿಕೆಟ್‌. ಮೊದಲ ದಿನವೇ ಮೇಲುಗೈ ಸಾಧಿಸಿದ ಕರ್ನಾಟಕ. ದಿನದಂತ್ಯಕ್ಕೆ 199/4, 144 ರನ್‌ ಮುನ್ನಡೆ. ಸ್ಮರಣ್‌ ಔಟಾಗದೆ 83 ರನ್‌.

 ಬೆಂಗಳೂರು : ಕರ್ನಾಟಕದ ವೇಗದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌ ರಣಜಿ ಟ್ರೋಫಿ 6ನೇ ಸುತ್ತಿನ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 55 ರನ್‌ಗೆ ಆಲೌಟ್‌ ಆಗಿ ತೀವ್ರ ಹಿನ್ನಡೆ ಅನುಭವಿಸಿದೆ. ಮೊದಲ ದಿನವೇ ದಿಟ್ಟ ಬ್ಯಾಟಿಂಗ್‌ ನಡೆಸಿದ ಕರ್ನಾಟಕ, ದಿನದಂತ್ಯಕ್ಕೆ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿದ್ದು, 144 ರನ್‌ ಮುನ್ನಡೆ ಸಂಪಾದಿಸಿದೆ.

ವಿಜಯ್‌ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಅಮೋಘ ಶತಕ ಬಾರಿಸಿದ್ದ ಆರ್‌.ಸ್ಮರಣ್‌, ತಮ್ಮ ಲಯವನ್ನು ಮುಂದುವರಿಸಿದ್ದು ಔಟಾಗದೆ 83 ರನ್‌ ಗಳಿಸಿದ್ದಾರೆ. ಕರ್ನಾಟಕ ಬೃಹತ್‌ ಮೊತ್ತ ಕಲೆಹಾಕಿ, ಪಂದ್ಯದಲ್ಲಿ ಮತ್ತೊಮ್ಮೆ ಬ್ಯಾಟ್‌ ಮಾಡುವುದನ್ನು ತಪ್ಪಿಸುವ ಯೋಜನೆಯಲ್ಲಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಕರ್ನಾಟಕ ನಾಯಕ ಮಯಾಂಕ್‌ ಅಗರ್‌ವಾಲ್‌ರ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ವೇಗಿಗಳು ದಾಳಿ ಸಂಘಟಿಸಿದರು. ತಾರಾ ಆಟಗಾರ ಶುಭ್‌ಮನ್‌ ಗಿಲ್‌ರ ಸೇರ್ಪಡೆ ಪಂಜಾಬ್‌ಗೆ ದೊಡ್ಡ ಲಾಭವನ್ನೇನೂ ತಂದುಕೊಡಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ನಾಯಕ ಗಿಲ್‌ (04) ಮೊದಲಿಗರಾಗಿ ವಿಕೆಟ್‌ ಕಳೆದುಕೊಂಡರು. ಪ್ರಭ್‌ಸಿಮ್ರನ್‌ (06) ಸಹ ನೆಲೆಯೂರಲಿಲ್ಲ. ಆರಂಭಿಕರಿಬ್ಬರನ್ನೂ ಎಡಗೈ ವೇಗಿ ಅಭಿಲಾಷ್‌ ಶೆಟ್ಟಿ ಔಟ್‌ ಮಾಡಿದರೆ, ಮಧ್ಯಮ ಕ್ರಮಾಂಕವನ್ನು ವಾಸುಕಿ ಕೌಶಿಕ್‌ ಹಾಗೂ ಪ್ರಸಿದ್ಧ್‌ ಕೃಷ್ಣ ಉರುಳಿಸಿದರು. ರಮಣ್‌ದೀಪ್‌ ಸಿಂಗ್‌ (16) ತಂಡದ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ ಎನಿಸಿದರೆ, 8ನೇ ಕ್ರಮಾಂಕದಲ್ಲಿ ಆಡಿದ ಮಯಾಂಕ್‌ ಮಾರ್ಕಂಡೆ (12) ಎರಡಂಕಿ ಮೊತ್ತ ದಾಟಿದ 2ನೇ ಬ್ಯಾಟರ್‌ ಎನಿಸಿದರು. ಕೇವಲ 29 ಓವರಲ್ಲಿ ಪಂಜಾಬ್‌ ಇನ್ನಿಂಗ್ಸ್‌ ಕೊನೆಗೊಂಡಿತು.

ವಾಸುಕಿ ಕೌಶಿಕ್‌ 4, ಅಭಿಲಾಷ್‌ ಶೆಟ್ಟಿ 3, ಪ್ರಸಿದ್ಧ್‌ ಕೃಷ್ಣ 2 ಹಾಗೂ ಯಶೋವರ್ಧನ್‌ 1 ವಿಕೆಟ್‌ ಕಬಳಿಸಿದರು. ಚೊಚ್ಚಲ ಶತಕದತ್ತ ಸ್ಮರಣ್‌: ಕರ್ನಾಟಕ ಮೊದಲ ವಿಕೆಟ್‌ಗೇ 55 ರನ್‌ ಜೊತೆಯಾಟವಾಡಿ, ಪಂಜಾಬ್‌ನ ಮೊತ್ತವನ್ನು ಸರಿಗಟ್ಟಿತು. ಕೆ.ವಿ.ಅನೀಶ್‌ 33 ರನ್‌ ಗಳಿಸಿ ಔಟಾದ ಬಳಿಕ 20 ರನ್‌ ಗಳಿಸಿದ್ದ ನಾಯಕ ಮಯಾಂಕ್‌ ಅಗರ್‌ವಾಲ್‌ ಪೆವಿಲಿಯನ್‌ ಸೇರಿದರು. ದೇವ್‌ದತ್‌ ಪಡಿಕ್ಕಲ್‌ ಹಾಗೂ ಆರ್‌.ಸ್ಮರಣ್‌ರ ನಡುವಿನ 52 ರನ್‌ ಜೊತೆಯಾಟ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಪಡಿಕ್ಕಲ್‌ (27) ಔಟಾದ ಬಳಿಕ ಸ್ಮರಣ್‌ಗೆ ಜೊತೆಯಾದ ಕೆ.ಎಲ್‌.ಶ್ರೀಜಿತ್‌ (26) ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ದಿನದಾಟದ ಕೊನೆಯಲ್ಲಿ ಶ್ರೀಜಿತ್‌ ವಿಕೆಟ್‌ ಕಳೆದುಕೊಂಡಾಗ ತಂಡದ ಮೊತ್ತ 192 ರನ್‌. ಆಕರ್ಷಕ ಬ್ಯಾಟಿಂಗ್‌ ಮೂಲಕ ಗಮನ ಸೆಳೆದ ಸ್ಮರಣ್‌ 100 ಎಸೆತದಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ ಔಟಾಗದೆ 83 ರನ್‌ ಗಳಿಸಿದ್ದು ಚೊಚ್ಚಲ ಶತಕದತ್ತ ಸಾಗಿದ್ದಾರೆ. ಅಭಿನವ್‌ ಮನೋಹರ್‌ 1 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಸ್ಕೋರ್‌: ಪಂಜಾಬ್‌ 29 ಓವರಲ್ಲಿ 55/10 (ರಮಣ್‌ದೀಪ್‌ 16, ಮಯಾಂಕ್‌ 12, ಕೌಶಿಕ್‌ 4-16, ಅಭಿಲಾಷ್‌ 3-19), ಕರ್ನಾಟಕ (ಮೊದಲ ದಿನಕ್ಕೆ) 50 ಓವರಲ್ಲಿ 199/4 (ಸ್ಮರಣ್‌ 83*, ಅನೀಶ್‌ 33, ಆರಾಧ್ಯ 1-29)06 ಕ್ಯಾಚ್‌

ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ವಿಕೆಟ್‌ ಕೀಪರ್‌ ಕೆ.ಎಲ್‌.ಶ್ರೀಜಿತ್‌ 6 ಕ್ಯಾಚ್‌ ಹಿಡಿದು ಗಮನ ಸೆಳೆದರು.