ಸಾರಾಂಶ
ಬೆಂಗಳೂರು : ಬೆಂಗಳೂರಿನ ಯಲಹಂಕ ಸಮೀಪ 60 ಎಕರೆ ಪ್ರದೇಶದಲ್ಲಿ ಸ್ಪೋರ್ಟ್ಸ್ ಸಿಟಿ ಮಾಡುವ ಯೋಜನೆಯಿದೆ. ಇದಕ್ಕಾಗಿ ಸರ್ಕಾರ ಜಾಗವನ್ನೂ ಮೀಸಲಿಟ್ಟಿದೆ ಎಂದು ಗೃಹ ಸಚಿವ ಹಾಗೂ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದರು.
ಕರ್ನಾಟಕ ಒಲಿಂಪಿಕ್ ಸಂಸ್ಥೆ(ಕೆಒಎ) ಹಾಗೂ ರಾಜ್ಯ ಕ್ರೀಡಾ ಇಲಾಖೆ ವತಿಯಿಂದ ಗುರುವಾರ ಕಂಠೀರವ ಕ್ರೀಡಾಂಗಣದ ಕೆಒಎ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಬೆಂಗಳೂರು ದೇಶದಲ್ಲೇ ಐಟಿ ರಾಜಧಾನಿ ಎಂಬ ಖ್ಯಾತಿ ಗಳಿಸಿದೆ. ಕ್ರೀಡೆಯಲ್ಲೂ ನಮ್ಮ ರಾಜ್ಯ ವಿಶ್ವದಲ್ಲೇ ಗಮನಸೆಳೆಯಬೇಕು. ಕನ್ನಡಿಗರು ಪದಕ ಗೆದ್ದರೆ ಖಂಡಿತಾ ಜಗತ್ತಿನಲ್ಲೇ ನಮ್ಮ ರಾಜ್ಯ ಖ್ಯಾತಿ ಗಳಿಸಲಿದೆ ಎಂದರು.
‘ಧ್ಯಾನ್ ಚಂದ್ ಅವರಲ್ಲಿದ್ದ ಕ್ರೀಡಾ ಮನಸ್ಥಿತಿ, ಬದ್ಧತೆ ಇಂದಿನ ಕ್ರೀಡಾಪಟುಗಳಲ್ಲಿ ಕಾಣಿಸುತ್ತಿಲ್ಲ. ಭಾರತೀಯ ಕ್ರೀಡಾಪಟುಗಳಿಗೆ ಸೌಲಭ್ಯದಲ್ಲಿ ಯಾವುದೇ ಕೊರತೆಯಾಗಿಲ್ಲ. ಮ್ಯಾಪ್‌ನಲ್ಲಿ ಚುಕ್ಕಿಯಂತೆ ಕಾಣುವ ಆಫ್ರಿಕಾ ಸೇರಿ ಕೆಲ ಸಣ್ಣ ಸಣ್ಣ ದೇಶಗಳು ಏನೂ ಸೌಲಭ್ಯಗಳಿಲ್ಲದಿದ್ದರೂ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುತ್ತವೆ. ಇದು ನಮ್ಮಿಂದ ಯಾಕೆ ಸಾಧ್ಯವಿಲ್ಲ? ಅಷ್ಟು ಸಾಮರ್ಥ್ಯ ನಮ್ಮಲ್ಲಿಲ್ಲವೇ? ನಾವು ಪದಕ ಗೆಲ್ಲಲೇಬೇಕು ಎಂಬ ಮನಸ್ಥಿತಿ, ಬದ್ಧತೆ, ದೃಢಸಂಕಲ್ಪ ನಮ್ಮಲ್ಲಿ ಕಡಿಮೆಯಾಗಿದೆ ಎಂದರು.
ಈಗಿನ ಅಥ್ಲೀಟ್‌ಗಳಿಗೆ ಈ ಹಿಂದೆ ಇಲ್ಲದಷ್ಟು ಮೂಲಸೌಕರ್ಯ ಒದಗಿಸಲಾಗುತ್ತಿದೆ. ಕಂಠೀರವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಇದೆ. 18 ಜಿಲ್ಲೆಗಳಲ್ಲೂ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗಿದೆ. ನಮ್ಮಲ್ಲಿ ಸೌಲಭ್ಯಗಳಿಲ್ಲ ಎಂದು ಹೇಳಲೇಬಾರದು.
ಕ್ರೀಡಾಪಟುಗಳಲ್ಲಿ ಬದ್ಧತೆ, ಸಂಕಲ್ಪ ಇರಬೇಕು. ರೋಲ್‌ಮಾಡೆಗಳನ್ನು ಅನುಕರಣೆ ಮಾಡಬೇಕು. ಇದು ಕ್ರೀಡೆಯಲ್ಲಿ ಬಹಳ ಮುಖ್ಯ ಎಂದರು.ಕರ್ನಾಟಕದಲ್ಲಿ ಇರುವಷ್ಟು ಸೌಲಭ್ಯ ಬೇರೆಲ್ಲೂ ಇಲ್ಲ. ಒಲಿಂಪಿಕ್ ಸಂಸ್ಥೆಗೆ ನಮ್ಮಲ್ಲಿ ಇರುವಷ್ಟು ಉತ್ತಮ ಕಟ್ಟದ ದೇಶದಲ್ಲಿ ಎಲ್ಲೂ ಇಲ್ಲ. ಗೋವಿಂದರಾಜು ಅವರು ಇದಕ್ಕಾಗಿ ಸಾಕಷ್ಟು ಪರಿಶ್ರಮಪಡುತ್ತಿದ್ದಾರೆ.
ಅವರು ಸರ್ಕಾರದ ಹಣ ಕೂಡಾ ತೆಗೆಯುತ್ತಿಲ್ಲ. ಅವರೇ ಅದಕ್ಕೆ ದಾರಿ ಕಂಡುಕೊಂಡಿದ್ದಾರೆ ಎಂದು ಪರಮೇಶ್ವರ್ ಅವರು ಶ್ಲಾಘಿಸಿದರು.ದೇಶದಲ್ಲಿ ಈಗ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿದೆ. ಪ್ರಧಾನಿಯಿಂದ ಹಿಡಿದು ಯಾವುದೇ ಮುಖ್ಯಮಂತ್ರಿಗಳವರೆಗೆ ಎಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಮ್ಯಾಪ್‌ನಲ್ಲಿ ಚುಕ್ಕಿಯಂತೆ ಕಾಣುವ ಕತಾರ್ ದೇಶ ಫಿಫಾ ವಿಶ್ವಕಪ್‌ಗೆ 8 ಕ್ರೀಡಾಂಗಣಗಳನ್ನು ನಿರ್ಮಿಸಿದೆ. ಕ್ರೀಡೆಯಲ್ಲಿ ಈ ರೀತಿ ಹೂಡಿಕೆ ಮಾಡಿದರೆ ಅದರ ಫಲ ಖಂಡಿತಾ ಸಿಗಲಿದೆ. ಒಂದಿಡೀ ದೇಶದ ಯುವಕರನ್ನು ಕ್ರೀಡೆಯತ್ತ ಸೆಳೆಯಬಹುದು ಎಂದರು.
ನಮ್ಮ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಶೇ.2 ಮೀಸಲಾತಿ ನೀಡಲಾಗುತ್ತಿತ್ತು. ಅದನ್ನು ಈಗ ಶೇ.3ಕ್ಕೆ ಹೆಚ್ಚಿಸಲಾಗಿದೆ. ಪೊಲೀಸ್, ಅರಣ್ಯ ಮಾತ್ರವಲ್ಲದೆ ಈಗ ಎಲ್ಲಾ ಇಲಾಖೆಗಳಲ್ಲೂ ನಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಮೀಸಲಾತಿ ನೀಡುತ್ತಿದೆ. ನೀವು ಪದಕ ಗೆದ್ದರೆ ಹಣ, ನೌಕರಿ, ಜಮೀನು ನೀಡಲಾಗುತ್ತದೆ. ಈ ರೀತಿಯ ಸಹಕಾರ ಬೇರೆಲ್ಲೂ ಸಿಗುವುದಿಲ್ಲ ಎಂದು ಹೇಳಿದರು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ರಾಜ್ಯದ 18 ಕ್ರೀಡಾಪಟುಗಳಿಗೆ ಸಮಾರಂಭದಲ್ಲಿ ವಿಶೇಷ ಸನ್ಮಾನ ಮಾಡಲಾಯಿತು. ಕೆಒಎ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಸೇರಿ ಪ್ರಮುಖರು ಉಪಸ್ಥಿತರಿದ್ದರು.
ಕ್ರೀಡೆಯಿಂದ ಡ್ರಗ್ಸ್ ತಡೆಗಟ್ಟಲು ಸಾಧ್ಯ
ಇತ್ತೀಚೆಗೆ ಯುವಕರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಡ್ರಗ್ಸ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಕ್ರೀಡೆಯತ್ತ ಕೊಂಡೊಯ್ದರೆ ಈ ದೇಶದ ಉತ್ತಮ ಪ್ರಜೆಗಳಾಗುತ್ತಾರೆ. ಅವರ ಚಿಂತನೆಗಳೂ ಕೂಡಾ ಬದಲಾಗುತ್ತದೆ. ಯುವಕರು ಹೆಚ್ಚಿನ ಪ್ರಮಾಣದಲ್ಲಿ ಕ್ರೀಡೆಯತ್ತ ಬಂದರೆ ಡ್ರಗ್ಸ್, ಮಾದಕ ವ್ಯಸನ ತನ್ನಿಂತಾನೇ ಕಡಿಮೆಯಾಗುತ್ತದೆ. ದೇಶ ಕ್ರೀಡೆಯಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ಅಭಿಪ್ರಾಯಪಟ್ಟರು.
₹6 ಕೋಟಿ ಘೋಷಿಸಿದ ಮೊದಲ ರಾಜ್ಯ
ಕೊಡಗು ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ತಂಡಗಳು ಪಾಲ್ಗೊಳ್ಳುವ ಹಾಕಿ ಟೂರ್ನಿ ನಡೆಯುತ್ತದೆ. ಕೊಡಗು ಎಂದರೆ ಹಾಕಿಯ ಬೀಡು. ಆದರೆ ರಾಜ್ಯದ ಒಬ್ಬರೂ ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ತಂಡದಲ್ಲಿರಲಿಲ್ಲ ಎಂಬ ನೋವಿದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಮೂವರು ಕನ್ನಡಿಗರಾದರೂ ಇರಬೇಕು. ಕ್ರೀಡಾ ಇಲಾಖೆ ಅಧಿಕಾರಿಗಳು, ಕೋಚ್‌ಗಳು ಸಹಕರಿಸಿದರೆ ಖಂಡಿತಾ ಇದು ಸಾಧ್ಯವಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ರಾಜ್ಯದ 9 ಮಂದಿ ಪಾಲ್ಗೊಂಡಿದ್ದರು. ಒಲಿಂಪಿಕ್ಸ್ ಪದಕ ಗೆದ್ದವರಿಗೆ ₹6 ಕೋಟಿ ಘೋಷಣೆ ಮಾಡಿದ ಏಕೈಕ ರಾಜ್ಯ ನಮ್ಮದು. ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಕ್ರೀಡಾಪಟುಗಳಿಗೆ ಮೀಸಲಾತಿ ನೀಡಿದ ಮೊದಲ ರಾಜ್ಯ ಕರ್ನಾಟಕ.
-ಡಾ.ಕೆ.ಗೋವಿಂದರಾಜು, ಕೆಒಎ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ