ಗುಜರಾತ್‌ ಅಬ್ಬರಕ್ಕೆ ಪಂಜಾಬ್‌ ಕಿಂಗ್ಸ್ ಶರಣು

| Published : Apr 22 2024, 02:00 AM IST / Updated: Apr 22 2024, 05:01 AM IST

ಸಾರಾಂಶ

ಪಂಜಾಬ್‌ ವಿರುದ್ಧ ಟೈಟಾನ್ಸ್‌ಗೆ 3 ವಿಕೆಟ್‌ ಜಯ. ಕಳಪೆ ಪ್ರದರ್ಶನ ತೋರಿದ ಪಂಜಾಬ್‌ಗೆ ಇದು ಟೂರ್ನಿಯಲ್ಲಿ ಆಡಿರುವ 8 ಪಂದ್ಯದಲ್ಲಿ 6ನೇ ಸೋಲು.

ಚಂಡೀಗಢ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ 4ನೇ ಗೆಲುವು ದಾಖಲಿಸಿದೆ. ಭಾನುವಾರ ಪಂಜಾಬ್‌ ಕಿಂಗ್ಸ್‌ ವಿರುದ್ಧ ಶುಭ್‌ಮನ್‌ ಗಿಲ್‌ ಬಳಗಕ್ಕೆ 3 ವಿಕೆಟ್‌ ಜಯ ಲಭಿಸಿತು. 

ಬ್ಯಾಟಿಂಗ್, ಬೌಲಿಂಗ್‌ ಎರಡರಲ್ಲೂ ಕಳಪೆ ಪ್ರದರ್ಶನ ತೋರಿದ ಪಂಜಾಬ್‌ ಟೂರ್ನಿಯಲ್ಲಿ ಆಡಿರುವ 8 ಪಂದ್ಯದಲ್ಲಿ 6ನೇ ಸೋಲನುಭವಿಸಿತು.ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 20 ಓವರಲ್ಲಿ 142 ರನ್‌ಗೆ ಸರ್ವಪತನ ಕಂಡಿತು. ಈ ಮೊತ್ತ ಗುಜರಾತ್‌ಗೆ ಏನೇನೂ ಸಾಲಲಿಲ್ಲ. 6 ವಿಕೆಟ್‌ ಕಳೆದುಕೊಂಡ ಹೊರತಾಗಿಯೂ ತಂಡ 19.1 ಓವರ್‌ಗಳಲ್ಲಿ ಗೆಲುವು ತನ್ನದಾಗಿಸಿಕೊಂಡಿತು.ಶುಭ್‌ಮನ್‌ ಗಿಲ್‌(35), ಸಾಯಿ ಸುದರ್ಶನ್‌(31) ಆರಂಭದಲ್ಲಿ ತಂಡವನ್ನು ಕಾಪಾಡಿದರೆ, ಕೊನೆಯಲ್ಲಿ ಅಬ್ಬರಿಸಿದ ರಾಹುಲ್‌ ತೆವಾಟಿಯಾ 18 ಎಸೆತದಲ್ಲಿ 36 ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಬ್ಯಾಟಿಂಗ್‌ ವೈಫಲ್ಯ: ಇದಕ್ಕೂ ಮುನ್ನ ಪಂಜಾಬ್‌ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಯಿತು. ಆರಂಭಿಕರಾಗಿ ಕಣಕ್ಕಿಳಿದ ಪ್ರಭ್‌ಸಿಮ್ರನ್‌ 35, ನಾಯಕ ಸ್ಯಾಮ್‌ ಕರ್ರನ್‌ 20 ರನ್‌ಗೆ ನಿರ್ಗಮಿಸಿದರು. ವಿಕೆಟ್‌ ನಷ್ಟವಿಲ್ಲದೆ 52 ರನ್‌ ಗಳಿಸಿದ್ದ ತಂಡ ಬಳಿಕ ಕುಸಿತಕ್ಕೊಳಗಾಯಿತು. ಕೊನೆಯಲ್ಲಿ ಹರ್‌ಪ್ರೀತ್‌ ಬ್ರಾರ್‌ 12 ಎಸೆತದಲ್ಲಿ 29 ರನ್‌ ಸಿಡಿಸಿದರು.ಸ್ಕೋರ್‌: ಪಂಜಾಬ್‌ 20 ಓವರಲ್ಲಿ 142/10 (ಪ್ರಭ್‌ಸಿಮ್ರನ್‌ 35, ಹರ್‌ಪ್ರೀತ್‌ 29, ಕಿರೋರ್‌ 3-33), ಗುಜರಾತ್‌ 19.1 ಓವರಲ್ಲಿ 146/7 (ತೆವಾಟಿಯಾ 36*, ಗಿಲ್‌ 35, ಹರ್ಷಲ್‌ 3-15)